ಮಾನ್ವಿ : ಶಿಕ್ಷಕರ ಅತ್ಯಂತ ದೊಡ್ಡ ಗೆಲುವು ಎಂದರೆ ಅವರ ವಿದ್ಯಾರ್ಥಿಗಳು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬಾಳುವುದಾಗಿದೆ ಎಂದು ಜಂಬೂ ದ್ವೀಪ ಕನ್ನಡ ದಿನಪತ್ರಿಕೆ ಸಂಪಾದಕರಾದ ರಾಜಶೇಖರ್ ಹೆಚ್. ಹೇಳಿದರು.
ಪಟ್ಟಣದ ಕಲ್ಮಠ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಮೊಬೈಲ್‌ಗಳು ಹಾಗೂ ಪುಸ್ತಕಗಳಲ್ಲಿ ಎಲ್ಲ ರೀತಿಯ ಮಾಹಿತಿಯೂ ಲಭ್ಯವಿದೆ. ಆದರೆ ವಿದ್ಯಾರ್ಥಿಗಳು ತಪ್ಪು ದಾರಿಯಲ್ಲಿ ಸಾಗುವುದನ್ನು ತಡೆದು, ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಮಾರ್ಗದರ್ಶನ ನೀಡುವವರು ಶಿಕ್ಷಕರು. ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಅಂತಹ ಉತ್ತಮ ಶಿಕ್ಷಕರಿದ್ದು, ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಬೇಕು ಎಂದು ಹೇಳಿದರು.
ಕಲ್ಮಠ ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ಜಿಎಂಎಚ್‌ಪಿಎಸ್ ಗುಂಜಳ್ಳಿ ಶಾಲೆಯ ಶಿಕ್ಷಕಿ ಹನುಮಂತಮ್ಮ ತಮ್ಮಾಪುರ್ ಮಾತನಾಡಿ, ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ, ಬದಲಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವವರಾಗಿದ್ದಾರೆ. ಶಿಕ್ಷಕರು ಸ್ವತಃ ದೀಪವಾಗಿ ಮಕ್ಕಳಿಗೆ ದಾರಿದೀಪವಾಗುತ್ತಾರೆ ಎಂದರು.
ಕಲ್ಮಠ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಂಗಯ್ಯ ಸ್ವಾಮಿ, ಕಲ್ಮಠ ಪ್ರೌಢಶಾಲೆಯ ಮುಖ್ಯ ಗುರು ಪ್ರಭಯ್ಯ ಸ್ವಾಮಿ, ಪ್ರೌಢಶಾಲಾ ಶಾಲಾ ಸಂಸತ್ ಮುಖ್ಯಮಂತ್ರಿ ವೀರೇಶ್, ಪ್ರಾಥಮಿಕ ಶಾಲಾ ಸಂಸತ್ ಮುಖ್ಯಮಂತ್ರಿ ಅನಿಲಕುಮಾರ್ ಸೇರಿದಂತೆ ಸೌಭಾಗ್ಯ, ಪೂಜಾ, ಮಲ್ಲಿಕಾರ್ಜುನ, ಸಾಗರ್ ಹಾಗೂ ಇನ್ನಿತರ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಲ್ಮಠ ಪ್ರಾಥಮಿಕ ಶಾಲೆಯ ಮುಖ್ಯ ಗುರು ಮಂಜುನಾಥ ಕಮತರ ಅಧ್ಯಕ್ಷತೆ ವಹಿಸಿದ್ದರು. ಎಂ.ಎಂ. ಹಿರೇಮಠ್, ಕೆಮ್ಯಾನಾಯ್ಕ, ಭ್ರಮರಾಂಬ, ರವಿ ಹುಲಿಯಾಪುರ, ಜಯಶ್ರೀ, ಮಹಾಂತಮ್ಮ, ನರಸಿಂಹಲು, ರಾಘವೇಂದ್ರ, ರೂಪ, ಗೀತಾ, ಪ್ರಭಾವತಿ, ರಿಜ್ವಾನ, ಸೌಮ್ಯ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರಿ ಅಪ್ಸಾನ ಬೇಗ ಕಾರ್ಯಕ್ರಮ ನಿರೂಪಿಸಿದರು. ಕುಮಾರ ಮನೋಜಕುಮಾರ್ ಸ್ವಾಗತಿಸಿದರು. ಕುಮಾರಿ ಶೈಲಜಾ ವಂದಿಸಿದರು.
ವರದಿ: ಆಂಜನೇಯ ನಸಲಾಪುರ


