ಕಿತ್ತೂರು : ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಚೇರಿಯಲ್ಲಿ ಆಸ್ತಿ ವಿವಾದದ ಸಂಬಂಧಿಸಿದಂತೆ ತಂದೆ ಹಾಗೂ ಮಗಳನ್ನು ಕೊಲೆ ಮಾಡಿರುವ ಘಟನೆ ನಡೆದಿದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಮಡಿವಾಳಪ್ಪ ಕುಂದರಗಿ ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 16 ರಂದು ಬೆಳಗ್ಗೆ ಸುಮಾರು 11.15ರ ವೇಳೆಗೆ ಧಾರವಾಡ ನಿವಾಸಿ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಅವರು ಆಸ್ತಿ ನಂಬರ್ 135ರ ಹೆಸರು ದಾಖಲಾತಿ ಅರ್ಜಿಯ ವಿಚಾರಣೆಗಾಗಿ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿದ್ದರು.
ಈ ವೇಳೆ ಆಸ್ತಿ ವಿಚಾರವಾಗಿ ಆರೋಪಿಗಳು ಹಾಗೂ ರುದ್ರಪ್ಪ ಮತ್ತು ಶಶಿಕಲಾ ಅವರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಆರೋಪಿಗಳು ಕೂಡಗೋಲು ಹಾಗೂ ಕಲ್ಲುಗಳಿಂದ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ರುದ್ರಪ್ಪ ಹಾಗೂ ಶಶಿಕಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಲಾಟೆಯನ್ನು ಬಿಡಿಸಲು ಮುಂದಾದ ರಾಹುಲ್ ಎಂಬುವವರ ಮೇಲೆಯೂ ಕೊಡಗೋಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಆರೋಪಿಗಳು ನಂತರ ಸ್ಥಳದಿಂದ ಪರಾರಿಯಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ ಹಾಗೂ ಬೈಲಹೊಂಗಲ ಡಿವೈಎಸ್‌ಪಿ ಡಾ. ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಸಿಪಿಐ ಶಿವಾನಂದ ಬಿ. ಗುಡಗನಟ್ಟಿ, ಪಿಎಸ್‌ಐ ಭರತ್ ಎಸ್., ಪಿಎಸ್‌ಐ ಜಿ.ಜಿ. ಹಂಪಣ್ಣವರ ಹಾಗೂ ಪೋಲಿಸ ಸಿಬ್ಬಂದಿ ವರ್ಗದವರು ಕಾರ್ಯಾಚರಣೆ ನಡೆಸಿ, ಸೆಪ್ಟೆಂಬರ್ 18 ರಂದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ ಆರೋಪಿಗಳನ್ನು ಕಾರ್ಯಾಗ್ರಹ ಕ್ಕೆ ಕಳುಹಿಸುತ್ತಾರೆ.
ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಸಿದ್ದಾರೆ.
ವರದಿ : ರಾಜು ಮುಂಡೆ


