ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಬೆಳಗಾವಿ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಾದ್ಯಂತ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಎರಡು ಕಿಲೋಮೀಟರ್ ವ್ಯಾಪ್ತಿಯನ್ನು 'ರೆಡ್ ಝೋನ್ - ನೋ ಫ್ಲೈ ಝೋನ್' ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 19ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಅವರಿಗೆ 'ಝಡ್ ಪ್ಲಸ್' ಸಿಆರ್‌ಪಿಎಫ್ (Z+ CRPF) ಭದ್ರತೆ ಇರುವ ಕಾರಣ, ಅವರ ಸಂಚಾರ ಮಾರ್ಗ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಅತ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಭದ್ರತಾ ಆದೇಶದನ್ವಯ, ವಿಮಾನ ನಿಲ್ದಾಣದ ಸುತ್ತಲಿನ 2 ಕಿಲೋಮೀಟರ್ ಪ್ರದೇಶದಲ್ಲಿ ಮಾನವರಹಿತ ವೈಮಾನಿಕ ವಾಹನಗಳು (UAV), ಮಾನವರಹಿತ ವಿಮಾನ ವ್ಯವಸ್ಥೆಗಳು (UAS), ಡ್ರೋನ್‌ಗಳು ಹಾಗೂ ಪ್ಯಾರಾಗ್ಲೈಡರ್‌ಗಳ ಬಳಕೆ ಮತ್ತು ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ನಿಯಮ ಉಲ್ಲಂಘನೆ ನಡೆಯದಂತೆ ಕಟ್ಟುನಿಟ್ಟಿನ ಕಣ್ಗಾವಲು ವಹಿಸಲಾಗಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಸಜ್ಜಾಗಿದೆ.


