ಬೆಳಗಾವಿ : ಜಿಲ್ಲೆಯ (Belagavi) ಗೋಕಾಕ ಟೌನ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರ ಸಾವಿಗೆ (Woman death) ಸಂಬಂಧಿಸಿದಂತೆ ಕೊಲೆ ಪ್ರಕರಣ (Crime) ದಾಖಲಾಗಿದೆ.
ಗೋಕಾಕ ಫಾಲ್ಸ್ ಹಿಲ್ ಪ್ರದೇಶದಲ್ಲಿ ಅಕ್ಟೋಬರ್ 28ರಂದು ಸಂಜೆ ಸುಮಾರು 4 ಗಂಟೆಯಿಂದ 4.05ರ ನಡುವೆ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರುದಾರರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ನವೆಂಬರ್ 1ರಂದು ರಾತ್ರಿ 9 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಖ್ಯೆ 268/2026 ಆಗಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1), 238 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(2)(v) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ದೂರಿನ ಪ್ರಕಾರ, ಮೃತ ಮಹಿಳೆ ಮತ್ತು ಆರೋಪಿತ ವ್ಯಕ್ತಿಯ ನಡುವೆ ಸುಮಾರು ಮೂರು ನಾಲ್ಕು ವರ್ಷಗಳ ಸಂಬಂಧವಿತ್ತು. ಈ ಘಟನೆಯ ದಿನ ಆರೋಪಿ ಮಹಿಳೆಯನ್ನು ಗೋಕಾಕ ಫಾಲ್ಸ್ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು ಎಂಬುದು ಆರೋಪವಾಗಿದೆ.
ಅಲ್ಲಿ ಇಬ್ಬರ ನಡುವೆ ಮಾತುಕತೆ ನಡೆದಿದ್ದು, ನಂತರ ಆರೋಪಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಮೃತದೇಹವನ್ನು ಕಣಿವೆಯ ಪ್ರದೇಶದಲ್ಲಿ ಎಸೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮೃತ ಮಹಿಳೆ ಮೈತಾ ಅವರ ವಯಸ್ಸು 25 ವರ್ಷ ಎಂದು ಎಫ್ಐಆರ್ ನಲ್ಲಿ ದಾಖಲಾಗಿದ್ದು, ತನಿಖೆಯಿಂದ ಅಪರಾಧ ಕೃತ್ಯ ಸಾಬೀತಾಗಬೇಕಿದೆ.


