ಹರಿತವಾದ ಆಯುಧದಿಂದ ಹೊಟ್ಟೆಗೆ ಇರಿತ; ಆರೋಪಿಗಳು ಪೋಲಿಸರ ವಶಕ್ಕೆ.
ನಿಪ್ಪಾಣಿ : ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಜತ್ರಾಟ್ ವೆಸ್ ಪ್ರದೇಶದ ಚರ್ಮಕಾರರ ಗಲ್ಲಿಯಲ್ಲಿ ಸಣ್ಣಪುಟ್ಟ ವಿವಾದವೊಂದು ಸಣ್ಣ ಜಗಳ ದಿಂದ ವಿಕೋಪಕ್ಕೆ ತಿರುಗಿ, ಯುವಕನೊಬ್ಬನನ್ನು ಹರಿತವಾದ ಆಯುಧದಿಂದ ಇರಿದು ಕೊಲೆಗೈದ ಘಟನೆ ನಡೆದಿದೆ. ಈ ಘಟನೆಯಲ್ಲಿ ಅಭಿಷೇಕ್ ಅನಿಲ ಬಾಮನೆ ಎಂಬ ಯುವಕ ಮೃತಪಟ್ಟಿದ್ದಾನೆ ಮೃತ ಅಭಿಷೇಕ್ ಅವರು ಚರ್ಮದ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಪಡೆದ ಪ್ರಾಥಮಿಕ ಮಾಹಿತಿಯ ಪ್ರಕಾರ, ಇಬ್ಬರು ಯುವಕರ ನಡುವೆ ಸಣ್ಣಪುಟ್ಟ ಕಾರಣಕ್ಕೆ ವಾಗ್ವಾದ ನಡೆದಿತ್ತು. ಬಳಿಕ ವಾಗ್ವಾದವು ಜಗಳಕ್ಕೆ ತಿರುಗಿದ್ದು, ಈ ವೇಳೆ ಅಭಿಷೇಕ್ ಬಾಮನೆ ಅವರ ಹೊಟ್ಟೆಗೆ ಹರಿತವಾದ ಆಯುಧದಿಂದ ಇರಿದಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ ಅವರನ್ನು ಚಿಕಿತ್ಸೆಗಾಗಿ ಕರೆದೊಯ್ಯುವ ಪ್ರಯತ್ನ ನಡೆದರೂ, ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹಬ್ಬದ ಸಂಭ್ರಮದ ನಡುವೆಯೇ ಈ ಘಟನೆ ನಡೆದಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ಘಟನೆಯ ಮಾಹಿತಿ ದೊರೆತ ತಕ್ಷಣ ನಿಪ್ಪಾಣಿ ನಗರ ಪೋಲೀಸರು ಸ್ಥಳಕ್ಕೆ ಧಾವಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ .
ಈ ಕುರಿತು ನಿಪ್ಪಾಣಿ ನಗರ ಪೋಲೀಸರು ತನಿಖೆಯನ್ನು ಮುಂದುವರಿಸಿದ್ದು, ಕೊಲೆಗೆ ನಿಖರವಾದ ಕಾರಣ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ತನಿಖೆಯ ನಂತರ ಸ್ಪಷ್ಟವಾಗಬೇಕಿದೆ ಇನ್ನು ಯಾವುದೇ ರೀತಿಯ ಅಧಿಕೃತ ತನಿಖೆಯ ಮಾಹಿತಿ ಬಂದ ಬಳಿಕ ನಿಜವಾದ ಬಣ್ಣ ಬಯಲಿಗೆ ಬರಲಿದೆ.
ವರದಿ : ರಾಜು ಮುಂಡೆ


