ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕಾವೇರಿ ನೀರು ಹಂಚಿಕೆ ವಿವಾದ ಕಾವು ಪಡೆದುಕೊಂಡಿದ್ದು, ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ನಿರ್ದೇಶನದ ವಿರುದ್ಧ ಕನ್ನಡಪರ ಸಂಘಟನೆಗಳು ಸಮರ ಸಾರಿವೆ.
ಪ್ರತಿಭಟನೆಯ ಭಾಗವಾಗಿ ಆಗಸ್ಟ್ 13ರಂದು ರಾಜ್ಯಾದ್ಯಂತ ಪೂರ್ಣ ಪ್ರಮಾಣದ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದೆ.
ನಗರದ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ನಡೆದ ವಿವಿಧ ಕನ್ನಡಪರ ಒಕ್ಕೂಟಗಳ ಸಭೆಯ ನಂತರ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಆಗಸ್ಟ್ 13ರ ಗುರುವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ 'ಅಖಂಡ ಕರ್ನಾಟಕ ಬಂದ್' ನಡೆಯಲಿದೆ ಎಂದು ಪ್ರಕಟಿಸಿದರು. ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆಗಳಿಲ್ಲದ ದಿನಾಂಕ ನೋಡಿ ಈ ನಿರ್ಧಾರ ತಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ನೇರ ಎಚ್ಚರಿಕೆ ರವಾನಿಸಿದ ಅವರು, ಕಾವೇರಿ ವಿಚಾರದಲ್ಲಿ ನಾಟಕೀಯ ಸಭೆಗಳನ್ನು ನಡೆಸುವುದು ಸರಿ ಅಲ್ಲ ಎಂದರು. ಸದಾ ಸರ್ವಪಕ್ಷ ಸಭೆಗಳನ್ನು ಕರೆದು ಕಾಲಹರಣ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಈ ಬಾರಿ ಗಟ್ಟಿಯಾದ ನಿರ್ಧಾರ ತಳೆಯಬೇಕು ಎಂದು ಒತ್ತಾಯಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ಹಾಗೂ ಕನ್ನಡ ಶಾಲೆಯ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.


