ಬೆಳಗಾವಿ: ರಾಜ್ಯ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಆರೋಗ್ಯದಲ್ಲಿ ದಿಢೀರ್ (Health Condition) ಏರುಪೇರು ಉಂಟಾಗಿದ್ದು, ಸಾರ್ವಜನಿಕರಲ್ಲಿ ಹಾಗೂ ಬಿಜೆಪಿ ಮುಖಂಡರಲ್ಲಿ ತೀವ್ರ ಆತಂಕ ಮೂಡಿಸಿತ್ತು.
ವಿಶೇಷ ವಿಮಾನದ ಮೂಲಕ ತಡರಾತ್ರಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅಮಿತ್ ಶಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಹಲವು ಹಿರಿಯ ನಾಯಕರು ಆತ್ಮೀಯವಾಗಿ ಸ್ವಾಗತಿಸಿದ್ದರು.
ಆದರೆ, ನಗರಕ್ಕೆ ತಲುಪಿದ ಬಳಿಕ ಅವರ ಆರೋಗ್ಯ ಸ್ಥಿತಿ ಏಕಾಏಕಿ ಕ್ಷೀಣಿಸಿದ್ದು, ಖಾಸಗಿ ಹೋಟೆಲ್‌ನಲ್ಲಿ ವೈದ್ಯರ ತಂಡದಿಂದ ಅಗತ್ಯ ಚಿಕಿತ್ಸೆ ಪಡೆಯಬೇಕಾಯಿತು.
ಅಮಿತ್ ಶಾ ಅವರ ಅನಾರೋಗ್ಯದ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಗೃಹ ಸಚಿವರಿಗೆ ಫುಡ್ ಪಾಯಿಸನ್ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಆರೋಗ್ಯ ಸಮಸ್ಯೆಯಿಂದಾಗಿ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಜೋಲ್ಲೆ ಸಂಸ್ಥೆಯ ಪ್ರಮುಖ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ವೈದ್ಯರ ಸಲಹೆಯಂತೆ ಅವರು ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದಿದ್ದಾರೆ.
ಪ್ರಸ್ತುತ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು, ಸಂಪೂರ್ಣ ಕ್ಷೇಮವಾಗಿದ್ದಾರೆ. ಆದರೆ, ಆಹಾರ ವ್ಯತ್ಯಾಸದಿಂದಾಗಿ ಕೊಂಚ ನಿಶ್ಯಕ್ತಿ (ವೀಕ್ನೆಸ್) ಇರುವುದರಿಂದ ವೈದ್ಯರು ಅವರಿಗೆ ಹೆಚ್ಚಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ಜೋಶಿ ವಿವರಿಸಿದ್ದಾರೆ.


