ಮಾನ್ವಿ: ಅಖಿಲಭಾರತ ಕಿಸಾನ್ ಸಂಘಟನೆಯ ರಾಜ್ಯ ಸಂಚಾಲಕ ಬಸಲಿಂಗಪ್ಪ ಮಾತನಾಡಿ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ರೈತರಿಗೆ ಸೂಕ್ತ ಬೆಳೆ ನಷ್ಟ ಪರಿಹಾರ ನೀಡಬೇಕು ಕೃಷಿ ಸಾಲ ಮನ್ನಾ ಮಾಡಬೇಕು ಹಾಗೂ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಪಾವತಿಸಿದ ರೈತರ ಖಾತೆಗಳಿಗೆ ವಿಮೆ ಪರಿಹಾರದ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಮಾನ್ವಿ ಪಟ್ಟಣದ ಬಸವ ವೃತ್ತದಿಂದ ಅಖಿಲಭಾರತ ಕಿಸಾನ್ ಸಂಘಟನೆಯ ತಾಲೂಕು ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
ಮಾನ್ವಿ ಮತ್ತು ಸಿರವಾರ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ಕಾಲುವೆ ನೀರು ಹರಿಸಬೇಕು. ಕೃಷಿ ಕೂಲಿಕಾರರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಗಟ್ಟಲು ಉದ್ಯೋಗ ಖಾತ್ರಿ ಯೋಜನೆಯಡಿ ನಿರಂತರವಾಗಿ ಕೆಲಸ ಒದಗಿಸಬೇಕು. ಕಂಬಳತ್ತಿ ಕುರ್ಡಿ ಚೀಕಲಪರ್ವಿ ಅಲ್ದಾಳ ಮುರಾನಪುರ ಕೆ. ಗುಡದಿನ್ನಿ ಗಣದಿನ್ನಿ ಹಾಗೂ ಹಳ್ಳಿ ಸೇರಿದಂತೆ ಮಾನ್ವಿ ಮತ್ತು ಸಿರವಾರ ತಾಲೂಕುಗಳ ಎಲ್ಲಾ ಅರ್ಹ ಸಾಗುವಳಿದಾರರ ಬಗರ್ ಹುಕುಂ ಸರ್ಕಾರಿ ಭೂಮಿಯನ್ನು ತಿರಸ್ಕರಿಸದೆ ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಭೂ ಒಡೆತನ ಯೋಜನೆಯಡಿ ಒಪ್ಪಿಗೆ ಪತ್ರ ಪಡೆದಿರುವ ರೈತರ ಜಮೀನುಗಳ ಖರೀದಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಭೂಹೀನ ಬಡವರಿಗೆ ಭೂಮಿ ಹಂಚಿಕೆ ಮಾಡಬೇಕು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಅಭಾವ ನಿವಾರಿಸಲು ಕೊಳವೆಬಾವಿ ಕೊರೆಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಅಥವಾ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಬೇಕು. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಒದಗಿಸಬೇಕು. ಬುರಾನಪುರ ಗ್ರಾಮದ ಸರ್ವೆ ನಂ. 54ರ ಸರ್ಕಾರಿ ಭೂಮಿಯಲ್ಲಿ ನಿವೇಶನ ರಹಿತರಿಗೆ ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲಭಾರತ ಕಿಸಾನ್ ಸಂಘಟನೆಯ ಜಿಲ್ಲಾಧ್ಯಕ್ಷ ವಿ. ಮುದುಕಪ್ಪ ನಾಯಕ ದೇವಪ್ಪ ಗುಡದಿನ್ನಿ ರವಿಕುಮಾರ ಭೀಮರಾಯ ದಿಲೀಪ್ ಟೈಲರ್ ಯಲ್ಲಪ್ಪ ನಾಯಕ ನರಸಪ್ಪ ಮಲ್ಲಪ್ಪಗೌಡ ಆನಂದ ಭೋವಿ ಪ್ರಸಾದ ಕುರ್ಡಿ ಆಂಜನೇಯ್ಯ ಬಲ್ಲಟ್ಟಗಿ ಅಂಬ್ರೇಶಪ್ಪ ಚೀಕಲಪರ್ವಿ ಸೇರಿದಂತೆ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ :ಆಂಜನೇಯ ನಸಲಾಪುರ


