ಬಾಗಲಕೋಟೆ: ಕರ್ತವ್ಯ ಲೋಪ, ಕರ್ತವ್ಯ ನಿರ್ಲಕ್ಷ್ಯ, ಅಧಿಕಾರ ದುರುಪಯೋಗ ಹಾಗೂ ದುರ್ವರ್ತನೆ ಆರೋಪದಡಿ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಡಿ ಎಚ್ ಓ ರಾಜಕುಮಾರ ಯರಗಲ ಅವರನ್ನು ರಾಜ್ಯ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ
ತಮ್ಮ ಪುತ್ರಿ ಡಾ ಅಂಕಿತಾ ಯರಗಲ ಎಸಗಿರುವ ಕರ್ತವ್ಯ ಲೋಪ ತಿಳಿದಿದ್ದರೂ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಕರ್ತವ್ಯ ನಿರ್ಲಕ್ಷ್ಯ ವಹಿಸಿದ್ದನ್ನು ಅಮಾನತು ಆದೇಶದಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಿಸ್ತು ಪ್ರಾಧಿಕಾರ ಹಾಗೂ ಆಯುಕ್ತರಾದ ಗುರುದತ್ತ ಹೆಗಡೆ ಅವರು ಈ ಅಮಾನತು ಆದೇಶವನ್ನು ಜಾರಿಗೊಳಿಸಿದ್ದಾರೆ
ಬಾಗಲಕೋಟೆ ಶಾಸಕ ಉಮೇಶ ಮೇಟಿ ಆತನ ಸೊಸೆ ಹಾಗೂ ದಿವಂಗತ ಶಾಸಕ ಹೆಚ್ ವೈ ಮೇಟಿ ಮೊಮ್ಮಗಳಾಗಿರುವ ಡಾ ಅಂಕಿತಾ ಯರಗಲ ಡಿ ಎಚ್ ಒ ರಾಜಕುಮಾರ ಯರಗಲ ಪುತ್ರಿಯಾಗಿದ್ದಾರೆ ಇವರು ಬಾಗಲಕೋಟೆಯ ವಾಂಬೆ ಕಾಲೋನಿಯ ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು
ಕ್ಲಿನಿಕ್‌ಗೆ ಕರ್ತವ್ಯಕ್ಕೆ ಹಾಜರಾಗದೆ ನಿಯಮ ಬಾಹಿರವಾಗಿ 70 ಸಾವಿರ ರೂ ವೇತನ ಪಡೆಯುತ್ತಿದ್ದರು. ಅಷ್ಟೇ ಅಲ್ಲದೆ ಸರ್ಕಾರದ ಯಾವುದೇ ಪೂರ್ವಾನುಮತಿ ಪಡೆಯದೆ ಬಾಗಲಕೋಟೆಯ ಎಸ್ ಎನ್ ಮೆಡಿಕಲ್ ಕಾಲೇಜಿನಲ್ಲಿ ಎಂ ಡಿ (ಪ್ಯಾಥಾಲಜಿ) ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವುದು ಬಯಲಾಗಿತ್ತು.
ಈ ಅಕ್ರಮದ ಕುರಿತು ಸೆಪ್ಟೆಂಬರ್ 12ರಂದು ಮಾಧ್ಯಮದಲ್ಲಿ ವಿಸ್ತೃತ ತನಿಖಾ ವರದಿ ಪ್ರಸಾರ ಮಾಡಿ ನಿರಂತರವಾಗಿ ಫಾಲೋ-ಅಪ್ ಸುದ್ದಿಗಳನ್ನು ಬಿತ್ತರಿಸಿತ್ತು ಈ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಬಾಗಲಕೋಟೆ ಜಿ ಪಂ ಸಿ ಇ ಒ ಗಜಾನನ ಬಾಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
ಸೆಪ್ಟೆಂಬರ್ 16ರಂದು ಡಿಎಚ್‌ಒ ರಾಜಕುಮಾರ ಯರಗಲ ವಿಚಾರಣೆಗೆ ಹಾಜರಾಗಿದ್ದರೆ ಪುತ್ರಿ ಅಂಕಿತಾ ಹಾಜರಾಗದೆ ನಿರ್ಲಕ್ಷ್ಯ ತೋರಿದ್ದರು ಬಳಿಕ ಇಂದು (ಸೆಪ್ಟೆಂಬರ್ 18) ಪುನಃ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಅಂಕಿತಾ ವಿಚಾರಣೆಗೆ ಹಾಜರಾಗಿದ್ದರು.
ವಿಚಾರಣೆ ಮುಕ್ತಾಯವಾಗುತ್ತಿದ್ದಂತೆಯೇ ಬೆಂಗಳೂರಿನ ಆಯುಕ್ತರ ಕಚೇರಿಯಿಂದ ರಾಜಕುಮಾರ ಯರಗಲ ಅಮಾನತು ಆದೇಶ ಹೊರಬಿದ್ದಿದೆ ಈ ಹಿಂದೆಯೂ ಅಮಾನತಾಗಿದ್ದ ಯರಗಲ ಇದೀಗ ಪುತ್ರಿಯ ಕರ್ತವ್ಯ ಲೋಪವನ್ನು ಮುಚ್ಚಿಡಲು ಯತ್ನಿಸಿ ಮತ್ತೆ ಅಮಾನತಾಗಿದ್ದಾರೆ.
ವರದಿ : ಬಸವರಾಜ ಪೂಜಾರಿ


