ಬೆಂಗಳೂರು: ತರಗತಿ ನಡೆಯುತ್ತಿದ್ದಾಗಲೇ ಸರ್ಕಾಅರಿ ಶಾಲೆಯೊಂದರಲ್ಲಿ ಕೊಠಡಿಯ ಮೇಲ್ಛಾವಣಿ ಕುಸಿದುಬಿದ್ದು, 8 ಮಕ್ಕಳು ಗಾಯಗೊಂಡ ಘಟನೆ ಬಾಗಲಕೋಟೆಯ ಮುಗಳೊಳ್ಳಿಯಲ್ಲಿ ನಡೆದಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ.
ಘಟನೆ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ, ಹೆಚ್ಚುವರಿ ಆಯುಕ್ತ, ಬಾಗಲಕೋಟೆ ಜಿಲ್ಲಾಧಿಕಾರಿ, ಬಾಗಲಕೋಟೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನ (ಬಿಇಒ) ಪ್ರತಿವಾದಿಯನ್ನಾಗಿ ಲೋಕಾಯುಕ್ತರು ನೋಟಿಸ್ ಜಾರಿ ಮಾಡಿದ್ಧಾರೆ.
ಈ ಸಂಬಂಧ ಅ.7 ರಂದು ಖುದ್ದು ಹಾಜರಾಗಿ ವರದಿ ಸಲ್ಲಿಸುವಂತೆ ಧಾರವಾಡದ ಹೆಚ್ಚುವರಿ ಆಯುಕ್ತರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಉಪ ನಿರ್ದೇಶಕರು ಹಾಗೂ ಬಿಇಒಗೆ ನಿರ್ದೇಶಿಸಿದ್ದಾರೆ.
ಘಟನೆಯ ಬಗ್ಗೆ ಬಾಗಲಕೋಟೆ ಜಿಲ್ಲೆಯ ಶಾಲೆಗಳಿಗೆ ಭೇಟಿ ನೀಡಿ, ಕಟ್ಟಡಗಳ ಸ್ಥಿತಿಗತಿ, ಸುರಕ್ಷತಾ ಮಾನದಂಡಗಳು ಮತ್ತು ಮೂಲಸೌಕರ್ಯಗಳನ್ನು ಸುರಕ್ಷತಾ ಪರಿಶೀಲನೆ ನಡೆಸಲು ಹಾಗೂ ವರದಿ ಸಲ್ಲಿಸಲು ಲೋಕಾಯುಕ್ತರು ಪೊಲೀಸರಿಗೆ ಸೂಚಿಸಿದ್ದಾರೆ.
ಬುಧವಾರ ಶಾಲಾ ಮೇಲ್ಛಾವಣಿ ಕುಸಿದ ಘಟನೆ ನಡೆದ ಬಳಿಕ ಬಾಗಲಕೋಟೆ ಜಿಲ್ಲಾಡಳಿತವು ದೀರ್ಘಕಾಲೀನ ಕ್ರಮ ನಡೆಸಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ 8 ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಿ, ಡಿಸ್ಚಾರ್ಜ್ ಮಾಡಲಾಗಿದೆ.
ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಿರಿಯ ಎಂಜಿನಿಯರ್ ಅಮಾನತುಗೊಳಿಸಲಾಗಿದೆ.
ಹಾಗೆಯೇ, ಅದೇ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಅಮಾನತುಗೊಳಿಸಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗಿದೆ.


