ತುರುವೇಕೆರೆ : ಚದುರಂಗ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವುದಲ್ಲದೆ ತಾರ್ಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಮನುಷ್ಯನ ಆಲೋಚನಾ ಸರಣಿಯಲ್ಲಿ ಸ್ಟಷ್ಟತೆ ಮತ್ತು ಪರಿಪೂರ್ಣತೆಗೆ ಅವಕಾಶವಾಗುತ್ತದೆ ಎಂದು ವಕೀಲ ಪಿ.ಎಚ್. ಧನಪಾಲ್ ಅಭಿಪ್ರಾಯಪಟ್ಟರು.
ಪಟ್ಟಣದ ಲಯನ್ಸ್ ಕ್ಲಬ್ ಮತ್ತು ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಸಂಯುಕ್ತವಾಗಿ ಲಯನ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ ಮುಕ್ತ ಚದುರಂಗ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತುರುವೇಕೆರೆಯಲ್ಲಿ ಆಗಿಂದಾಗ್ಗೆ ಲಯನ್ಸ್ ಕ್ಲಬ್, ಸ್ಪೋಟ್ಸ್ ಕ್ಲಬ್ ಮುಂತಾದ ಸಂಸ್ಥೆಗಳು ಚದುರಂಗ ಸ್ಪರ್ಧೆಗಳನ್ನು ನಡೆಸುತ್ತಿದ್ದು ರಾಜ್ಯದ ಗಮನವನ್ನು ಸೆಳೆದಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ಆಟಗಾರರು ಇಂದು ರಾಷ್ಟ್ರಮಟ್ಟದ ಆಟಗಾರರಾಗಿ ರೂಪುಗೊಂಡಿದ್ದಾರೆ. ಇದರ ಹಿನ್ನೆಲೆಯ ಶಕ್ತಿಯಾಗಿ, ಸ್ಪೂರ್ತಿಯಾಗಿ ನಿಂತಿರುವ ನುರಿತ ಆಟಗಾರರೂ, ತರಬೇತುದಾರರೂ ಆದ ಡಾ. ನಾಗರಾಜ್ ಅವರಿಗೆ ಅಭಿನಂದನೆ ಸಲ್ಲಬೇಕು ಎಂದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಗ್ಲೋಬಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಪ್ರೊ.ಗಂಗಾಧರ ದೇವರಮನೆ ಮಾತನಾಡಿ ಮಕ್ಕಳ ಸೃಜನಶೀಲ ಅಭಿವ್ಯಕ್ತಿಯನ್ನು ಕಾಪಾಡುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ಮಕ್ಕಳು ಸ್ವಯಂಪ್ರೇರಿತರಾಗಿ ಮಾಡುವ ಕೆಲಸಗಳಿಗಿಂತ ಒತ್ತಡದ ಪರಿಸರದಲ್ಲಿ ಹೆಚ್ಚು ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಚದುರಂಗದಂತಹ ಕ್ರೀಡೆಗಳು ಮಕ್ಕಳ ಕತೃತ್ವ ಶಕ್ತಿ ಮತ್ತು ಸೃಜನಶೀಲ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಿರುವುದರಿಂದ ಇಂತಹ ಪ್ರಯತ್ನಗಳಿಗೆ ಹೆಚ್ಚಿನ ಸಹಕಾರ ಕೊಡಬೇಕು ಎಂದರು.
ಚದುರಂಗ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮುಕ್ತ ವಿಭಾಗದಲ್ಲಿ ಕೆ.ಬಿ.ಕ್ರಾಸ್‌ನ ಬಸವೇಶ್, ತುಮಕೂರಿನ ದ್ರುವಲ್, ತುರುವೇಕೆರೆಯ ರವೀಂದ್ರ ಪ್ರಸಾದ್ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ತುಮಕೂರಿನ ಸುಮಲತಾ ಪ್ರಥಮ ಬಹುಮಾನ ಪಡೆದರು. ಪ್ರಾರಂಭಿಕ ವಿಭಾಗದಲ್ಲಿ ತುರುವೇಕೆರೆಯ ತೇಜಸ್ ಗೌಡ ಪ್ರಥಮ ಬಹುಮಾನ ಪಡೆದರು.
ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಸಿ. ಸುನಿಲ್ ಬಾಬು, ಡಾ.ನಾಗರಾಜ್, ರವಿ, ಟಿ.ವಿ. ಮಹೇಶ್, ಟಿ.ಎನ್. ಕಾರ್ತೀಕ್ ಇತರರು ಪಾಲ್ಗೊಂಡಿದ್ದರು.
ವರದಿ : ಗಿರೀಶ್ ಕೆ ಭಟ್


