ತುರುವೇಕೆರೆ : ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ತಾಲೂಕು ಕಛೇರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಂತರ ತಹಸೀಲ್ದಾರ್ ಮೂಲಕ ನೀರು ಹರಿಸದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎಸ್. ಲೋಕೇಶ್, ರಾಜ್ಯ ಬರಗಾಲದಲ್ಲಿ ತತ್ತರಿಸುತ್ತಿರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ರೈತರ ಹಿತವನ್ನು ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಮೈಸೂರು, ಮಂಡ್ಯ ಭಾಗದ ಜನರು ನೀರಿಗಾಗಿ ಪರಿತಪಿಸುತ್ತಿರುವಾಗ ಸರ್ಕಾರ ತಮಿಳುನಾಡಿಗೆ ನೀರು ಹರಿಸಿ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಕಿಡಿಕಾರಿದರು.
ತುರುವೇಕೆರೆ ತಾಲ್ಲೂಕಿನಲ್ಲಿ ಈ ವರ್ಷ ತೀವ್ರ ಮಳೆ ಕೊರತೆ ಉಂಟಾಗಿದೆ. ಸರ್ಕಾರ ತುರುವೇಕೆರೆ ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕೆಂದು ಶಾಸಕರು ಸೇರಿದಂತೆ ಎಲ್ಲರ ಒತ್ತಾಯವಾಗಿದೆ. ಆದರೆ ಈ ಭಾಗದ ಜನರ, ರೈತರ ಬದುಕಿಗೆ ಆಸರೆಯಾಗಿರುವ ಹೇಮಾವತಿ ನದಿ ನೀರನ್ನು ಕಾವೇರಿ ಜಲಾಶಯಕ್ಕೆ ಹರಿಸಿಕೊಂಡು ಅಲ್ಲಿಂದ ತಮಿಳುನಾಡಿಗೆ ಹರಿಸುತ್ತಿರುವುದು ಸರ್ಕಾರ ರಾಜ್ಯದ ಜನತೆಗೆ ಮಾಡಿರುವ ದ್ರೋಹವಾಗಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಗೌರವಾಧ್ಯಕ್ಷ ಗವಿರಂಗಪ್ಪ, ಉಪಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವಾಸು, ಪದಾಧಿಕಾರಿಗಳಾದ ಉಪೇಂದ್ರ ಕುಮಾರ್, ನಂದೀಶ್, ಚಂದ್ರಣ್ಣ, ಸಿಐಟಿಯು ಸತೀಶ್, ಬೀದಿಬದಿ ವ್ಯಾಪಾರಿಗಳ ಸಂಘದ ಮಾರುತಿ, ರೈತ ಸಂಘದ ಶ್ರೀನಿವಾಸಗೌಡ ಸೇರಿದಂತೆ ಇತರರಿದ್ದರು.
ವರದಿ : ಗಿರೀಶ್ ಕೆ ಭಟ್


