ಸೇಡಂ: ಪಟ್ಟಣದ ವಾರ್ಡ್ ಸಂಖ್ಯೆ–04ರ ಕೋಮಟಿ ಗಲ್ಲಿಯ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಗರ್ಭಿಣಿಯರು, ಬಾಣಂತಿಯರು, 6 ತಿಂಗಳಿಂದ 6 ವರ್ಷದ ಮಕ್ಕಳಿಗೆ ಹಾಗೂ ಕಿಶೋರಿಯರಿಗೆ ಸರ್ಕಾರದಿಂದ ಒದಗಿಸಲಾಗುವ ಪೂರಕ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಅಬ್ದುಲ್ ಸತ್ತಾರ್ ನಾಡೇಪಲ್ಲಿ ಉಪಸ್ಥಿತರಿದ್ದು, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜ್ಯೋತಿ ಎಂ.ಕೆ. ಹಾಗೂ ಸಹಾಯಕಿ ಶ್ರೀಮತಿ ಮಹೇಶ್ವರಿ ಅವರ ನೇತೃತ್ವದಲ್ಲಿ ಫಲಾನುಭವಿಗಳಿಗೆ ಅಕ್ಕಿ, ಹಾಲಿನ ಪುಡಿ, ಪೂರಕ ಪೌಷ್ಟಿಕ ಆಹಾರ, ಬೆಲ್ಲ, ಮಸಾಲೆ ಸೇರಿದಂತೆ ಎರಡು ತಿಂಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಬ್ದುಲ್ ಸತ್ತಾರ್ ನಾಡೇಪಲ್ಲಿ ಅವರು, ಸರ್ಕಾರದಿಂದ ಗರ್ಭಿಣಿಯರು, ಬಾಣಂತಿಯರು, 6 ತಿಂಗಳಿಂದ 6 ವರ್ಷದ ಮಕ್ಕಳಿಗೆ ಹಾಗೂ ಕಿಶೋರಿಯರಿಗೆ ನೀಡಲಾಗುತ್ತಿರುವ ಪೂರಕ ಪೌಷ್ಟಿಕ ಆಹಾರವು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸೇಡಂ ಪಟ್ಟಣದ ಎಲ್ಲಾ ಯುವಕರು ತಮ್ಮ ತಮ್ಮ ವಾರ್ಡ್‌ಗಳ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಪೌಷ್ಟಿಕ ಆಹಾರ ವಿತರಣೆಯಂತಹ ಜನಪರ ಕಾರ್ಯಕ್ರಮಗಳಲ್ಲಿ ಸ್ವಯಂಪ್ರೇರಿತವಾಗಿ ಸಹಕರಿಸುವ ಮೂಲಕ ಸರ್ಕಾರದ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.


