ಹುಬ್ಬಳ್ಳಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ರದ್ದುಗೊಳಿಸಿ ಪ್ರಜಾಪ್ರಭುತ್ವ ಹಾಗೂ ಮತದಾನದ ಹಕ್ಕನ್ನು ರಕ್ಷಿಸಬೇಕೆಂದು ಆಗ್ರಹಿಸಿ ಇಂದು ನಗರದಲ್ಲಿ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ‘ಪ್ರಜಾತಂತ್ರಕ್ಕಾಗಿ ನಿರ್ಭೀತ ನಡಿಗೆ’ ನಡೆಯಿತು.
.
ದುರ್ಗದ ಬೈಲ್ ವೃತ್ತದಿಂದ ಡಾ. ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ನಡಿಗೆ ನಡೆಯಿತು. ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸಿ ಹಿಂದಿನ ಮತದಾರರ ಪಟ್ಟಿ ಪರಿಷ್ಕರಣೆ ಪದ್ಧತಿಯನ್ನು ಮುಂದುವರಿಸಬೇಕು. ಎಸ್‌ಐಆರ್ ಜಾರಿಗೆ ಕಾರಣರಾದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಹಾಗೂ ಪ್ರಕ್ರಿಯೆಗೆ ವೆಚ್ಚ ಮಾಡಿದ ೧೦ ಸಾವಿರ ಕೋಟಿ ಮೊತ್ತವನ್ನು ಅವರಿಂದ ವಸೂಲಿ ಮಾಡಬೇಕು ಎಂದು ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಆಗ್ರಹಿಸಿದರು.
ಎಸ್‌ಐಆರ್ ಮೂಲಕ ಮತದಾರರನ್ನು ಹೊರಗಿಟ್ಟು ನಡೆಸಲಾಗಿದೆ ಎಂದು ಆರೋಪಿಸಲಾದ ವಿಧಾನಸಭಾ ಚುನಾವಣೆಗಳನ್ನು ಅಸಿಂಧುಗೊಳಿಸಿ ಮರುಚುನಾವಣೆ ನಡೆಸಬೇಕು. ಎಸ್‌ಐಆರ್ ವಿರೋಧಿ ಹೋರಾಟಗಾರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು. ದೆಹಲಿಯಲ್ಲಿ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ ಪೊಲೀಸರ ಹಾಗೂ ಆದೇಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಗುರುನಾಥ ಉಳ್ಳಿಕಾಶಿ ಬಸವರಾಜ ಸೂಳಿಭಾವಿ, ಮಹೇಶ ಪತ್ತಾರ, ಅನ್ವರ ಮುಧೋಳ, ಶರಣು ಗೊನವಾರ, ಶೋಭಾ ಕಮತರ ಸದಾನಂದ ಡಂಗನವರ, ಬಾಬಾಜಾನ ಮುಧೋಳ, ನಾಗರಾಜ ಗುರಿಕಾರ, ಬಶೀರಹ್ಮದ ಗುಡಮಾಲ, ಪ್ರೇಮನಾಥ ಚಿಕ್ಕತುಂಬಳ, ಅಲ್ತಾಫ್ ಕಿತ್ತೂರ, ಸತೀಶ ಮೆಹರವಾಡೆ, ರಾಜಶೇಖರ ಮೆಣಸಿನಕಾಯಿ, ಮಹೇಶ ದಾಬಡೆ, ಸೇರಿದಂತೆ ಅನೇಕರು ಪಾಲ್ಗೊಂಡಿದ್ರು.
ವರದಿ:ಸುಧೀರ್ ಕುಲಕರ್ಣಿ


