ಬೆಂಗಳೂರು: ಗಂಡನಿಗೆ ಬಿಸಿಯಾದ ದೋಸೆ ಹಾಗೂ ರಾಗಿ ಮುದ್ದೆ ಮಾಡಿಕೊಡಿ ಎಂದು ಅತ್ತೆ ಕೇಳುವುದು ಅಥವಾ ಮಾನಸಿಕ ಒತ್ತಡದಿಂದ ತಲೆಕೂದಲು ಉದುರುವುದು ಎಂದಿಗೂ ವರದಕ್ಷಿಣೆ ಕಿರುಕುಳ ಅಥವಾ ಕೌಟುಂಬಿಕ ದೌರ್ಜನ್ಯ ಎನಿಸುವುದಿಲ್ಲ. ವ್ಯಕ್ತಿಯೊಬ್ಬರ ವೈಯಕ್ತಿಕ ದೃಷ್ಟಿಯಲ್ಲಿನ ಪ್ರತಿಯೊಂದು ಸಣ್ಣಪುಟ್ಟ ದೂರುಗಳನ್ನು ಕಾನೂನಿನ ಅಡಿಯಲ್ಲಿ ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೊಸೆಗೆ ಖಡಕ್ ಆಗಿ ಬುದ್ಧಿ ಹೇಳಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ (FIR) ರದ್ದುಗೊಳಿಸುವಂತೆ ಕೋರಿ ಅತ್ತೆ ಮತ್ತು ಅವರ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಮಹತ್ವದ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಹೆಂಡತಿ ಕೋರ್ಟ್‌ನಲ್ಲಿ ಮಂಡಿಸಿದ ವಾದವೇನು?
ಪ್ರಕರಣದ ವಿಚಾರಣೆ ವೇಳೆ ಖುದ್ದು ಹಾಜರಾಗಿ ತಮ್ಮ ವಾದ ಮಂಡಿಸಿದ ಪತ್ನಿ, "ಪತಿಯ ಮನೆಯವರು ನನ್ನ ಮೇಲೆ ತೀವ್ರ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಎಸಗಿದ್ದಾರೆ. ನನಗೆ ಸರಿಯಾದ ಪೌಷ್ಟಿಕ ಆಹಾರ ನೀಡದೆ ಪ್ರತಿದಿನ ದೋಸೆ, ಅನ್ನ, ಸೊಪ್ಪು ಹಾಗೂ ಬೇಳೆ ಸಾರನ್ನಷ್ಟೇ ಕೊಡುತ್ತಿದ್ದರು.
ಆದರೆ ಅವರು ಮಾತ್ರ ಅತ್ಯುತ್ತಮ ಆಹಾರ ಸೇವಿಸುತ್ತಿದ್ದರು. ಅವರ ಕಿರುಕುಳ ತಾಳಲಾರದೆ ನನ್ನ ತಲೆಕೂದಲು ಉದುರಿದೆ," ಎಂದು ಅಳಲು ತೋಡಿಕೊಂಡರು.
ಮುಂದುವರಿದು, "ನನ್ನನ್ನು ಅಡುಗೆ ಮನೆಗೆ ಸೇರಿಸಲು ಅತ್ತೆ ಬಿಡುತ್ತಿರಲಿಲ್ಲ. ನಾನು ಗಳಿಸುತ್ತಿದ್ದ ಸಂಪೂರ್ಣ ಸಂಬಳವನ್ನು ಪತಿಗೆ ನೀಡುತ್ತಿದ್ದರಿಂದ ನನ್ನ ಖರ್ಚಿಗೆ ಹಣ ಉಳಿಯುತ್ತಿರಲಿಲ್ಲ. ಅತ್ತೆಯು ಪತಿಯನ್ನು ತನ್ನ ಕೊಠಡಿಯಲ್ಲೇ ಮಲಗಿಸಿಕೊಳ್ಳುತ್ತಿದ್ದಳು, ನಾನು ಐದೂವರೆ ತಿಂಗಳು ಏಕಾಂಗಿಯಾಗಿ ದುರಂತಮಯ ಜೀವನ ನಡೆಸಿ ಮನೆಯಿಂದ ಹೊರಬರಬೇಕಾಯಿತು.
ಅಷ್ಟೇ ಅಲ್ಲದೆ, ನನ್ನ ತಾಯಿ ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆ ಎಂದು ನನ್ನ ಘನತೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ಅವರ ವಿರುದ್ಧ ಮಾನಹಾನಿ ದೂರು ದಾಖಲಿಸಿದ್ದೇನೆ," ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಹೈಕೋರ್ಟ್ ಎತ್ತಿದ ಕಡಕ್ ಪ್ರಶ್ನೆಗಳು:
ಪತ್ನಿಯ ಈ ಸುದೀರ್ಘ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು, ಇಂತಹ ಸಣ್ಣಪುಟ್ಟ ಕೌಟುಂಬಿಕ ಕಲಹಗಳನ್ನು ಆಧರಿಸಿ ಐಪಿಸಿ ಸೆಕ್ಷನ್ 498A (ವರದಕ್ಷಿಣೆ ಕಿರುಕುಳ) ಹೇಗೆ ಹಾಕುವುದು ಎಂದು ಪ್ರಶ್ನಿಸಿದರು.
"ಪತಿಗೆ ಬೆಳಿಗ್ಗೆ 10 ಗಂಟೆಗೆ ತಿಂಡಿ ನೀಡಿದ ನಂತರವೇ ನಾನು ಊಟ ಮಾಡಬೇಕಿತ್ತು ಎಂಬುದು, ಹಾಗೂ ಗಂಡನಿಗೆ ಬಿಸಿಯಾದ ದೋಸೆ, ರಾಗಿ ಮುದ್ದೆ ಮಾಡಿಕೊಡಿ ಎಂದು ಅತ್ತೆ ಹೇಳುವುದು ಅಪರಾಧವಾಗುತ್ತದೆಯೇ? ಕುಟುಂಬ ಅಂದಮೇಲೆ ಸಣ್ಣಪುಟ್ಟ ಜಗಳಗಳು ನಡೆಯುವುದು ಸಹಜ. ದೂರುದಾರರ ದೃಷ್ಟಿಯಲ್ಲಿನ ಕಿರುಕುಳವೆಲ್ಲ ಕಾನೂನಿನ ವ್ಯಾಪ್ತಿಯಲ್ಲಿ ಕ್ರೌರ್ಯ ಎನಿಸುವುದಿಲ್ಲ. ಇಂತಹ ಆರೋಪಗಳನ್ನು ವಿಚ್ಛೇದನ (Divorce) ಕೋರುವ ಅರ್ಜಿಯಲ್ಲಿ ಪ್ರಸ್ತಾಪಿಸಬಹುದೇ ಹೊರತು, ಕೌಟುಂಬಿಕ ದೌರ್ಜನ್ಯ ಅಥವಾ ವರದಕ್ಷಿಣೆ ಕಿರುಕುಳ ಎಂದು ಪರಿಗಣಿಸಲಾಗದು," ಎಂದು ಪೀಠ ಸ್ಪಷ್ಟಪಡಿಸಿತು.
ಅಲ್ಲದೆ, "ಕಾನೂನಿನ ಅಡಿಯಲ್ಲಿ ಯಾವುದು ಕ್ರೌರ್ಯವೋ ಅದು ಮಾತ್ರ ಕ್ರೌರ್ಯ. ಸಣ್ಣಪುಟ್ಟ ದೂರುಗಳನ್ನು ಅದಕ್ಕೆ ಹೋಲಿಸಲು ಸಾಧ್ಯವಿಲ್ಲ. ನೀವು ಪರಸ್ಪರ ದೂರು-ಪ್ರತಿದೂರುಗಳನ್ನು ದಾಖಲಿಸಿಕೊಳ್ಳುವುದು ಕ್ರೌರ್ಯವಲ್ಲ. ಆದರೆ ಈ ಪ್ರಕರಣದಲ್ಲಿ ಪತಿಯನ್ನು ಕ್ಷಮಿಸಲು ಸಾಧ್ಯವಿಲ್ಲ," ಎಂದು ಪೀಠ ಅಭಿಪ್ರಾಯಪಟ್ಟಿತು.


