ಬೆಂಗಳೂರು: ಜಿಎಸ್‌ಟಿ ವಿಚಾರದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಹೇಳಿ ಕಬ್ಬಿಣದ ಅಂಗಡಿ ಮಾಲೀಕರಿಂದ ₹20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹8 ಲಕ್ಷ ಸ್ವೀಕರಿಸುವ ವೇಳೆ ಜಿಎಸ್‌ಟಿ ಅಧೀಕ್ಷಕರೊಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ನಗರ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಜಿಎಸ್‌ಟಿ ಅಧೀಕ್ಷಕ ಮೋಹಿತ್ ಪ್ರತಾಪ್ ಸಿಂಗ್ ಸಿಕ್ಕಿಬಿದ್ದಿದ್ದಾರೆ.ಕಬ್ಬಿಣದ ಅಂಗಡಿ ಮಾಲೀಕ ಜಮೀರ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಜಮೀರ್ ಅವರ ಅಂಗಡಿಗೆ ಸಂಬಂಧಿಸಿದ ಜಿಎಸ್‌ಟಿ ವಿಚಾರದಲ್ಲಿ ಸಮಸ್ಯೆ ಉಂಟಾಗಿತ್ತು ಎನ್ನಲಾಗಿದ್ದು, ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಅಧಿಕಾರಿ ₹20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಜಮೀರ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ₹8 ಲಕ್ಷ ಲಂಚದ ಹಣ ಸ್ವೀಕರಿಸುವ ವೇಳೆ ಮೋಹಿತ್ ಪ್ರತಾಪ್ ಸಿಂಗ್ ಅವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಮುಂದಿನ ತನಿಖೆ ಕೈಗೊಂಡಿದ್ದಾರೆ.


