ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ರಕ್ತಸಿಕ್ತ ಅಧ್ಯಾಯ ಮುಂದುವರಿದಿದ್ದು, ಹಾಡಹಗಲೇ ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಭೀತಿಯ ವಾತಾವರಣ ಸೃಷ್ಟಿಸಿದೆ.
ಸುಖದೇವ್ ಎಂಬುವವರ ಮೇಲೆ ಸಂಗಪ್ಪ ಪೂಜಾರಿ ಎಂಬಾತ ರಿವಾಲ್ವರ್‌ನಿಂದ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾನೆ.
ಆರೋಪಿ ಸಂಗಪ್ಪ ಪೂಜಾರಿ ದಿಢೀರನೇ ಸುಖದೇವ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ರಿವಾಲ್ವರ್‌ನಿಂದ ಸಿಡಿದ ಎರಡು ಗುಂಡುಗಳು ಸುಖದೇವ್ ಅವರ ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ತಗುಲಿವೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣವೇ ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡಿನ ದಾಳಿಯ ನಂತರ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಕೊಲ್ಹಾರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲವಾಗಿದ್ದು, ಪರಾರಿಯಾಗಿರುವ ಆರೋಪಿ ಸಂಗಪ್ಪ ಪೂಜಾರಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.


