ಕೆಪಿಎಸ್‌ಸಿ ಪರೀಕ್ಷೆಗಳು ಕನ್ನಡದಲ್ಲೇ ನಡೆಯಬೇಕು ಎಂದು ಕರವೇ ಆಗ್ರಹಿಸಿದೆ.ಪ್ರತಿ ಬಾರಿಯೂ ಕೆಪಿಎಸ್‌ಸಿ ಪರೀಕ್ಷೆ ನಡೆದಾಗ ಒಂದಲ್ಲಾ ಒಂದು ಅವಾಂತರಗಳು ನಡೆಯುತ್ತಿವೆ. ಇದನ್ನು ರಿಪೇರಿ ಮಾಡದಿದ್ದರೆ ಶಾಶ್ವತವಾಗಿ ಮುಚ್ಚಿ ಬಿಡುವುದೇ ವಾಸಿ ಎಂದು ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಕಿಡಿಕಾರಿದ್ದಾರೆ.
ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವಾಗ ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲೇ ನಡೆಸಬೇಕು. ಕೆಪಿಎಸ್‌ಸಿ ಪರೀಕ್ಷೆ ಬರೆದು ವಿವಿಧ ಹುದ್ದೆಗಳಿಗೆ ನೇಮಕವಾಗುವವರು ಕನ್ನಡದಲ್ಲಿಯೇ ಆಡಳಿತ ನಡೆಸಬೇಕು.
ಯಾಕೆಂದರೆ ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳೇ ಸರ್ಕಾರದ ಉದ್ಯೋಗ ಮಾಡಲು ಹೆಚ್ಚು ಸಮರ್ಥರು. ಹೀಗಾಗಿ ಎಲ್ಲಾ ಪರೀಕ್ಷೆಗಳೂ ಕನ್ನಡದಲ್ಲೇ ನಡೆಯಲಿ ಎಂದು ಅವರು ಆಗ್ರಹಿಸಿದ್ದಾರೆ.

