ತುರುವೇಕೆರೆ : ಮಾಜಿ ಪ್ರಧಾನಿ ದೇವೇಗೌಡರ ಮುಖ ನೋಡಿ ಜನ ನಿಮಗೆ ಮತ ನೀಡಿ ಗೆಲ್ಲಿಸಿದ್ದಾರೆಯೇ ಹೊರತು ನಿಮ್ಮ ವೈಯಕ್ತಿಕ ವರ್ಚಸ್ಸಿನಿಂದ ಒಮ್ಮೆಯೂ ಗೆಲ್ಲಲು ಸಾಧ್ಯವಿಲ್ಲ. ದೇವೇಗೌಡರ ಪೋಟೋ ಹಿಡಿಯದೆ, ಅವರ ಮುಖವನ್ನು ಜನರಿಗೆ ತೋರಿಸದೆ ಚುನಾವಣೆಯಲ್ಲಿ ನಿಂತು ಗೆದ್ದು ಬನ್ನಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಬೆಸ್ಕಾಂ ಮಾಜಿ ನಿರ್ದೇಶಕ, ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತಕುಮಾರ್ ಸವಾಲು ಹಾಕಿದರು.
ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಅಧಿಕಾರದಲ್ಲಿದ್ದೀರಿ, ತಾಲ್ಲೂಕಿಗೆ ಕೊಡುಗೆ ಏನು? ನಿಮ್ಮ ಸಾಧನೆ ಏನು? ತಾಲೂಕು ಕೇಂದ್ರದಲ್ಲಿರಬೇಕಾದಂತಹ ಸೌಕರ್ಯಗಳು ಒಂದಾದರೂ ತುರುವೇಕೆರೆ ಕ್ಷೇತ್ರದಲ್ಲಿದೆಯೇ? ತುರುವೇಕೆರೆ ಶೈಕ್ಷಣಿಕ ಕೇಂದ್ರವಾಗಲಿಲ್ಲ, ಮಾರುಕಟ್ಟೆ ಕೇಂದ್ರವಾಗಿಲ್ಲ, ಒಳಚರಂಡಿ ವ್ಯವಸ್ಥೆ ಪೂರ್ಣಗೊಂಡಿಲ್ಲ, ಕೋಟ್ಯಾಂತರ ರೂ ವೆಚ್ಚದ ವಾಣಿಜ್ಯ ಸಂಕೀರ್ಣ ಉದ್ಘಾಟನೆಯಾಗಿಲ್ಲ, ಟ್ರಾಫಿಕ್ ವ್ಯವಸ್ಥೆ ಹದಗೆಟ್ಟಿದೆ. ಪುರಾತನ ಕೆರೆ ಹೂಳೆತ್ತಿಲ್ಲ, ಕೆರೆ ಸಾಕಷ್ಟು ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸುವ ಕಾರ್ಯವಾಗಿಲ್ಲ. ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಾರ್ಮೆಂಟ್ಸ್, ಕೈಗಾರಿಕೆಗಳನ್ನು ಮಾಡಿಲ್ಲ. ತಾಲೂಕಿನ ರಸ್ತೆಗಳೆಲ್ಲಾ ಹದಗೆಟ್ಟಿವೆ. ಒಟ್ಟಾರೆ ತುರುವೇಕೆರೆ ತಾಲ್ಲೂಕಿನಲ್ಲಿ ಅಭಿವೃದ್ದಿ ಮರೀಚಿಕೆಯಾಗಿದ್ದು, ನಿಮ್ಮ ಆಡಳಿತದ ಸಾಧನೆ ಶೂನ್ಯವಾಗಿದೆ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಡಳಿತ, ದೂರದೃಷ್ಟಿಯ ಚಿಂತನೆಯ ಅರಿವಿಲ್ಲದೆ ರಿಯಲ್ ಎಸ್ಟೇಟ್ ವ್ಯಾಪಾರಿ, ಅನನುಭವಿ ಎಂದು ಟೀಕಿಸಿದ್ದೀರಿ. ಇಡೀ ಏಷ್ಯಾಕ್ಕೆ ದೊಡ್ಡದಾದ ಸೋಲಾರ್ ಪಾರ್ಕನ್ನು ಜಿಲ್ಲೆಯ ಪಾವಗಡದಲ್ಲಿ ನಿರ್ಮಿಸಿದ್ದು, ಕರ್ನಾಟಕದಲ್ಲಿ ಎಐ ವಿಶ್ವವಿದ್ಯಾನಿಲಯ ಸ್ಥಾಪಿಸುವ ಚಿಂತನೆಯೊಂದಿಗೆ ಕಾರ್ಯೋನ್ಮುಖರಾಗಿರುವುದು ಡಿ.ಕೆ.ಶಿವಕುಮಾರ್ ಎಂಬುದನ್ನು ಮರೆಯಬೇಡಿ. ನಿಮ್ಮ ಕುಟುಂಬ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿಲ್ಲವೇ? ಅಬಕಾರಿ ವ್ಯಾಪಾರ ಮಾಡುತ್ತಿಲ್ಲವೇ? ರಾಜಕೀಯ ಅಧಿಕಾರದ ಕಡೆಯ ದಿನಗಳಲ್ಲಿರುವ ನೀವು ರಾಷ್ಟ್ರೀಯ ಹೆದ್ದಾರಿಯ ಪಕ್ಕ ಸಿಎಲ್7 ಬಾರ್ ಅನ್ನು ತೆರೆಯುವಂತೆ ಮಾಡಿದ್ದು ನಿಮ್ಮ ಅನುಭವದ ಸಾಧನೆಯೇ? ಎಂದು ಕುಹಕವಾಡಿದರು.
ತಾಲೂಕಿನಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಶಾಸಕರ ಮಾತನ್ನೇ ಅಧಿಕಾರಿಗಳು, ನೌಕರರು ಕೇಳುತ್ತಿಲ್ಲ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಎಂ.ಟಿ.ಕೃಷ್ಣಪ್ಪನವರಿಗೇ ಸರ್ಕಾರಿ ನೌಕರರು ಗೌರವ ಕೊಡದಂತಾಗಿದೆ. ಸರ್ಕಾರಿ ಕಛೇರಿಗಳಲ್ಲಿ ಜನರಿಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಇನ್ನರ್ ವೀಲ್ ಸಂಸ್ಥೆಯ ಮಹಿಳೆಯರು ಜನರಿಗಾಗಿ ಸೇವಾ ಚಟುವಟಿಕೆಯಲ್ಲಿ ದಂಡಿನಶಿವರದಲ್ಲಿ ನಿರ್ಮಿಸಿದ ತಂಗುದಾಟಕ್ಕೆ ಬಯಲುಸೀಮೆ ನಿಗಮದಿಂದ ಅಧಿಕಾರಿಗಳು ಐದು ಲಕ್ಷ ರೂ ಬಿಲ್ ಮಾಡಲು ಹೊರಟಿದ್ದಾರೆ. ಶಾಸಕರು ತಾಲೂಕು ಕಛೇರಿಯಲ್ಲಿ ಕುಳಿತಾಗಲೀ, ಆಗಿಂದಾಗ್ಗೆ ಜನಸಂಪರ್ಕ ನಡೆಸಿಯಾಗಲೀ ಜನರ ಸಮಸ್ಯೆ ಆಲಿಸುವುದೇ ಇಲ್ಲ. ತಾಲೂಕಿನಲ್ಲಿ ಜನಸಾಮಾನ್ಯರ ಕಷ್ಟ ಕೇಳುವವರಿಲ್ಲದಂತಾಗಿದೆ ಎಂದು ಕಿಡಿಕಾರಿದರು.
ಶಾಸಕರು ಈ ಹಿಂದೆ ತಮ್ಮದೇ ಪಕ್ಷದವರ ವಿರುದ್ಧ ಹೆಡೆಮಟ್ಟೆ ಸೇವೆ ಮಾಡುವುದಾಗಿ ಹೇಳಿ ಆ ನಂತರ ನಡೆದ ಚುನಾವಣೆಯಲ್ಲಿ ಅವರ ಪರಿಸ್ಥಿತಿ ಏನಾಯಿತು ಎಂಬುದನ್ನು ಮರೆತಂತಿದೆ. ಈಗ ಬೆಂಬಲಿಗರ ಮೂಲಕ ಕುಣಿಗಲ್ ಶಾಸಕ ರಂಗನಾಥ್ ಅವರಿಗೆ ಹೆಡೆಮಟ್ಟೆ ಸೇವೆ ಮಾಡುವ ಬೆದರಿಕೆ ಹಾಕಿಸಿದ್ದಾರೆ. ಶಾಸಕರು ಹಾಗೂ ಅವರ ಕಾರ್ಯಕರ್ತರೇ ದಿನಾಂಕ ನಿಗದಿಪಡಿಸಲಿ ಡಾ.ರಂಗನಾಥ್ ಅವರನ್ನು ತುರುವೇಕೆರೆ ಕ್ಷೇತ್ರಕ್ಕೆ ಕರೆಸುತ್ತೇವೆ. ತಾಕತ್ತಿದ್ದರೆ ಹೆಡೆಮಟ್ಟೆ ಸೇವೆ ಮಾಡಲಿ ನೋಡೋಣ ಎಂದು ಚಾಲೆಂಜ್ ಹಾಕಿದ ಅವರು, ಹೆಡೆಮಟ್ಟೆ ಸಂಸ್ಕೃತಿ ನಮ್ಮದಲ್ಲ. ನಾವು ಕಾಂಗ್ರೆಸ್ ಪಕ್ಷದವರು ಗಾಂಧಿ ತತ್ವದ ಅನುಯಾಯಿಗಳು. ಹೆಡೆಮಟ್ಟೆ ನಿಮಗೆ ಹೇಗೆ ಮುಳುವಾಯಿತು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಮಾತನಾಡುವುದು ಒಳಿತು. ಹೆಡೆಮಟ್ಟೆ ನಿಮ್ಮ ಪಕ್ಷವನ್ನೇ ಸುಡುತ್ತದೆಯೇ ಹೊರತು ಬೇರೆಯವರನಲ್ಲ ಎಂಬುದನ್ನು ಮರೆಯಬೇಡಿ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಲಿಂಕ್ ಕೆನಾಲ್ ಯೋಜನೆಯಲ್ಲಿ ಎಷ್ಟು ಕಿಕ್ ಬ್ಯಾಕ್ ಪಡೆದಿದ್ದಾರೆಂದು ಪಶ್ನಿಸುವ ಗುತ್ತಿಗೆದಾರ, ಜೆಡಿಎಸ್ ವಕ್ತಾರ ವೆಂಕಟಾಪುರ ಯೋಗೀಶ್ ಅವರೇ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನೀವು ಬೇರೆಯವರ ಹೆಸರಿನಲ್ಲಿ ಮಾಡುತ್ತಿರುವ ಕಾಮಗಾರಿಗಳ ಬಗ್ಗೆ, ತಾಲ್ಲೂಕಿನಲ್ಲಿ ಮಾಡಿರುವ ಕಳಪೆ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾಗುತ್ತದೆ. ಕಾಮಗಾರಿಗಳ ಬಗ್ಗೆ ದಾಖಲೆಯೊಂದಿಗೆ ತನಿಖೆಗೆ ನೀಡಬೇಕಾಗುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡುವಾಗ ಮಾತು ಹಿಡಿತದಲ್ಲಿರಲಿ, ಇಲ್ಲವಾದರೆ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಟಿಯಲ್ಲಿ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಜಿಪಂ ಮಾಜಿ ಸದಸ್ಯ ಎನ್.ಆರ್.ಜಯರಾಮ್, ಮುಖಂಡರಾದ ನಂಜುಂಡಪ್ಪ, ಲಕ್ಷ್ಮೀದೇವಮ್ಮ, ಸಿ.ಎಸ್.ಮೂರ್ತಿ, ಲಕ್ಷ್ಮಣ್ ಸೇರಿದಂತೆ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


