ಬೆಳಗಾವಿ: ಮನೆಯ ಅಂಗಳದಲ್ಲೇ ಸದ್ದಿಲ್ಲದೆ ಬಂದು ಬಾತ್‌ರೂಮ್‌ನಲ್ಲಿ ಅಡಗಿ ಕುಳಿತಿದ್ದ ಚಿರತೆಯೊಂದು (Leopard) ಬೆಳಿಗ್ಗೆ ದಿಢೀರನೆ ಮಹಿಳೆಯ ಮೇಲೆಯೇ ದಾಳಿಗೆ ಯತ್ನಿಸಿದ ಘಟನೆ ಬೆಳಗಾವಿ(Belagavi) ಜಿಲ್ಲೆಯ ಖಾನಾಪುರ(Khanapura) ತಾಲೂಕಿನ ಗುಂಜಿ ಗ್ರಾಮದಲ್ಲಿ ನಡೆದಿದೆ.
ಅದೃಷ್ಟವಶಾತ್ ಸಮಯಪ್ರಜ್ಞೆ ಮೆರೆದ ಮಹಿಳೆ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಘಟನೆಯಿಂದ ಇಡೀ ಗ್ರಾಮದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಖಾನಾಪುರ ತಾಲೂಕಿನ ಗುಂಜಿ ಗ್ರಾಮದ ಸ್ಟೇಷನ್ ರಸ್ತೆಯಲ್ಲಿರುವ ಪ್ರಸಾದ್ ಗಾಡಿ ಎಂಬುವವರ ಮನೆಯಲ್ಲಿ ಈ ನಡುಕ ಹುಟ್ಟಿಸುವ ಘಟನೆ ಸಂಭವಿಸಿದೆ.
ರಾತ್ರಿ ಮನೆಯ ಹೊರಭಾಗದಲ್ಲಿದ್ದ ಹೊಸ ಶೌಚಾಲಯದೊಳಗೆ ನುಗ್ಗಿದ್ದ ಚಿರತೆ, ಯಾರಿಗೂ ತಿಳಿಯದಂತೆ ಇಡೀ ರಾತ್ರಿ ಅಲ್ಲೇ ಅಡಗಿ ಕುಳಿತಿತ್ತು.
ಭಾನುವಾರ ಬೆಳಿಗ್ಗೆಯಿಂದಲೇ ಕುಟುಂಬಸ್ಥರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ನಿರತರಾಗಿದ್ದು, ಪ್ರಸಾದ್ ಗಾಡಿ ಅವರು ಕೊಟ್ಟಿಗೆಯಲ್ಲಿದ್ದ ಜಾನುವಾರುಗಳನ್ನು ಹೊರಗೆ ತಂದು ಕಟ್ಟಿದ್ದರು. ಅಷ್ಟೇ ಅಲ್ಲದೆ, ಚಿರತೆ ಅಡಗಿದ್ದ ಸ್ಥಳದಿಂದ ಕೆಲವೇ ಅಡಿಗಳ ಅಂತರದಲ್ಲಿ ಮಕ್ಕಳು ಬಟ್ಟೆ ತೊಳೆಯುತ್ತಾ ಆಟವಾಡುತ್ತಿದ್ದರು.


