ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ, ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಶಾಸಕತ್ವ ತಾನಾಗಿಯೇ ರದ್ದಾಗಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ವಿಧಾನಸಭೆಯ ಯಾವುದೇ ಸದಸ್ಯರು ಕಾನೂನಾತ್ಮಕವಾಗಿ ಶಿಕ್ಷೆಗೆ ಒಳಗಾದಾಗ ತಾನಾಗಿಯೇ ಅವರ ಶಾಸಕತ್ವ ರದ್ದಾಗುತ್ತದೆ.
ಅದರಂತೆಯೇ ವಿನಯ್ ಕುಲಕರ್ಣಿ ಅವರ ಸದಸ್ಯ ಸ್ಥಾನವೂ ರದ್ದಾಗಿದೆ. ಇಂತಹ ಸಂದರ್ಭದಲ್ಲಿ ಸ್ಪೀಕರ್ ಗೆ ಸದಸ್ಯತ್ವ ರದ್ದು ಮಾಡುವ ಅಧಿಕಾರ ಇರುವುದಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಖಾದರ್ ಅವರು, ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ದೋಷಿ ಎಂದು ನ್ಯಾಯಾಲಯ ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನದ ಅನರ್ಹತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸಭೆ ಒಳಗೆ ಏನಾದರೂ ಘಟನೆಗಳು ನಡೆದಾಗ ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್ ಗೆ ಇದೆ. ಹೊರಗಿನ ವಿಚಾರಗಳಿಗೆ ಯಾವೊಬ್ಬ ಸದಸ್ಯನ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್ ಗೆ ಇಲ್ಲ. ನಿಯಮದ ಪ್ರಕಾರ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಶಾಸಕನ ಸದಸ್ಯತ್ವ ತಾನಾಗಿಯೇ ರದ್ದಾಗುತ್ತದೆ.
ಒಂದು ವೇಳೆ ನ್ಯಾಯಾಲಯದಲ್ಲಿ ದೋಷಿ ಎಂಬ ಆದೇಶಕ್ಕೆ ತಡೆ ನೀಡಿದಲ್ಲಿ ರದ್ದಾದ ಶಾಸಕ ಸ್ಥಾನ ತಾನಾಗಿಯೇ ವಾಪಸ್ ಬರುತ್ತದೆ ಎಂದು ತಿಳಿಸಿದ್ದಾರೆ.

