ತುರುವೇಕೆರೆ : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಕಟ್ಟೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ಹರಿಸುವಂತೆ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಭಾರತೀಯ ಜನತಾ ಪಕ್ಷ ಹಾಗೂ ಜಾತ್ಯಾತೀತ ಜನತಾದಳ ಸೇರಿದ ಎನ್.ಡಿ.ಎ. ಮೈತ್ರಿಕೂಟದ ವತಿಯಿಂದ ಆಗಸ್ಟ್ 10 ದಂದು ಜೆಡಿಎಸ್ ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈತ್ರಿಕೂಟದ ನಾಯಕರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ತಾಲೂಕಿನಲ್ಲಿ ಒಂದು ಎಕರೆ ಪ್ರದೇಶದಲ್ಲೂ ಭಿತ್ತನೆಯಾಗಿಲ್ಲ. ಶೇ.30ರಷ್ಟು ಮಳೆಯಾಗಿಲ್ಲ. ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಕ್ಷೇತ್ರವನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಿಸಬೇಕು. ಹೇಮಾವತಿ ಜಲಾಶಯದಲ್ಲಿ 29 ಟಿಎಂಸಿ ನೀರಿದ್ದು, ಕ್ಷೇತ್ರದ ಕೆರೆಕಟ್ಟೆಗಳಿಗೆ ನೀರು ಹರಿಸಿ ರೈತರ ನೆರವಿಗೆ ಧಾವಿಸಬೇಕು. ಬರಗಾಲ ತಾಂಡವವಾಡುತ್ತಿದ್ದು ಬೆಸ್ಕಾಂ ಇಲಾಖೆ ಅಧಿಕಾರಿಗಳು ತಮಗಿಷ್ಟ ಬಂದ ಹಾಗೆ ವಿದ್ಯುತ್ ನೀಡುತ್ತಿದ್ದಾರೆ. ಇದನ್ನು ನಿಲ್ಲಿಸಿ ಸರ್ಕಾರ ನಿಗದಿಪಡಿಸಿರುವ ತ್ರಿಫೇಸ್ ವಿದ್ಯುತ್ ಅನ್ನು ರೈತರಿಗೆ ಸಮಪರ್ಕವಾಗಿ ಒದಗಿಸಬೇಕು ಎಂದು ಆಗ್ರಹಿಸಿದರು.
ಲಿಂಕ್ ಕೆನಾಲ್ ಯೋಜನೆ ಅವೈಜ್ಞಾನಿಕವಾಗಿದೆ. ಕುಣಿಗಲ್ ತಾಲಲೂಕಿಗೆ ಮಾಗಡಿಗೆ 3.3 ಟಿಎಂಸಿ ನೀರು ನಿಗದಿಯಾಗಿದೆ. ಈಗಾಗಲೇ 7 ಟಿಎಂಸಿ ನೀರು ಕುಣಿಗಲ್ ಗೆ ಹೋಗುತ್ತದೆ. ಡಿ26 ಇಂದ 2.5 ಟಿಎಂಸಿ ನೀರು 21 ಕೆರೆಗೆ, ಡಿ27 ಇಂದ 1.5 ಟಿಎಂಸಿ ನೀರು 11 ಕೆರೆಗೆ, ಮಂಗಳ ಜಲಾಶಯಕ್ಕೆ 70 ಎಂ.ಸಿ.ಎಫ್.ಟಿ, ಕುಣಿಗಲ್ ಕೆರೆಗೆ 85 ಎಂ.ಸಿ.ಎಫ್.ಟಿ. ನೀರು, ಮಾರ್ಕೋನಹಳ್ಳಿ ಜಲಾಶಯಕ್ಕೆ ಸಾರಿಗೆಹಳ್ಳಿ, ಕೋಳಾಲ ಎಸ್ಕೇಪ್ ಇಂದ 2.4 ಟಿಎಂಸಿ ನೀರು ಹೋಗುತ್ತದೆ. ಇಷ್ಟೆಲ್ಲಾ ನೀರು ಹರಿಯುತ್ತಿದ್ದರೂ ಲಿಂಕ್ ಕೆನಾಲ್ ಯಾವ ಕಾರಣಕ್ಕೆ ಬೇಕೆಂದು ಸರ್ಕಾರ ತಿಳಿಸಿಲ್ಲ. ಸರ್ಕಾರದ ಉದ್ದೇಶ ಲಿಂಕ್ ಕೆನಾಲ್ ಯೋಜನೆ ಮಾಡಿ ಕುಣಿಗಲ್ ಮೂಲಕ ರಾಮನಗರ, ಚನ್ನಪಟ್ಟಣಕ್ಕೆ ನೀರು ಹರಿಸುವ ತಂತ್ರಗಾರಿಕೆ ಇದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಸರ್ಕಾರ ಲಿಂಕ್ ಕೆನಾಲ್ ಯೋಜನೆ ಕೈಬಿಟ್ಟು ಇದೇ ಹಣವನ್ನು ನಾಲೆ ಅಗಲೀಕರಣ ಮಾಡಿ ನೀರು ಹರಿಸಿಕೊಳ್ಳಲಿ ಎಂದರು. 
ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ಮುಂಗಾರು ಕೈಕೊಟ್ಟಿದೆ, ಹಿಂಗಾರು ಪ್ರಾರಂಭವಾಗಿಲ್ಲ. ಭಿತ್ತನೆ ಮಾಡಿದ ಬೆಳೆ ಒಣಗಿ ಹೋಗಿದೆ. ಹೇಮಾವತಿ ಜಲಾಶಯದಿಂದ ಕಾಲುವೆಗಳ ಮೂಲಕ ಕೆರೆಕಟ್ಟೆಗಳಿಗೆ ನೀರು ಹರಿಸುವ ಪ್ರಕ್ರಿಯೆ ಮೇ ತಿಂಗಳಲ್ಲೇ ಆರಂಭವಾಗಬೇಕಿತ್ತು. ಆಗಸ್ಟ್ ತಿಂಗಳು ಬಂದರೂ ಸಹ ಈವರೆಗೆ ನೀರು ಹರಿಸುವ ಬಗ್ಗೆ ಸರ್ಕಾರವಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಗಮನಹರಿಸದೆ ನಿರ್ಲಕ್ಷ್ಯ ವಹಿಸಿರುವುದು ರೈತ ವಿರೋಧಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೇಮಾವತಿ ಜಲಾಶಯದ ನೀರನ್ನೇ ನಂಬಿರುವ ಹಾಸನ, ತುಮಕೂರು ಜಿಲ್ಲೆಯ ತಾಲೂಕಿನ ರೈತರ ಹಿತವನ್ನು ಕಡೆಗಣಿಸಿ, ಈ ಭಾಗದ ಕೆರೆಕಟ್ಟೆಗಳಿಗೆ ನೀರು ಹರಿಸುವುದನ್ನು ನಿರ್ಲಕ್ಷಿಸಿ ಹೇಮಾವತಿ ಜಲಾಶಯದಿಂದ ಕಾವೇರಿ ಜಲಾಶಯಕ್ಕೆ 500 ಎಂ.ಸಿ.ಎಫ್.ಟಿ ನೀರನ್ನು ಹರಿಸುತ್ತಿರುವುದು ಖಂಡನೀಯ. ಕೂಡಲೇ ಕಾವೇರಿ ಜಲಾಶಯಕ್ಕೆ ಹರಿಸುತ್ತಿರುವ ನೀರನ್ನು ನಿಲ್ಲಿಸಿ ಕ್ಷೇತ್ರದ ಕೆರೆಕಟ್ಟೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ನೀರು ಹರಿಸದೆ ನಿರ್ಲಕ್ಷಿಸಿರುವ ಸರ್ಕಾರದ ವಿರುದ್ಧ ಆಗಸ್ಟ್ 10 ರಂದು ಮೈತ್ರಿ ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಕ್ಷೇತ್ರದ ಎಲ್ಲಾ ರೈತರು ನಾಗರೀಕರು ಹೆಚ್ಚಿನದಾಗಿ ಪಾಲ್ಗೊಳ್ಳಬೇಕೆಂದರು.
ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ಸರ್ಕಾರ ರಾಜ್ಯದ ರೈತರ ಹಿತವನ್ನು ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸಲು ಮುಂದಾಗಿದ್ದು ಈ ಕ್ರಮಕ್ಕೆ ಮೈತ್ರಿಕೂಟ ವಿರೋಧ ವ್ಯಕ್ತಪಡಿಸುತ್ತದೆ. ಮಳೆಯಿಲ್ಲದೆ ಕೆರೆಕಟ್ಟೆಗಳಿಗೆ ನೀರಿಲ್ಲ, ಅಂತರ್ಜಲ ಬತ್ತಿಹೋಗಿದೆ. ಕೂಡಲೇ ವಿಧಾನಸಭಾ ಕ್ಷೇತ್ರದ ಕೆರೆಕಟ್ಟೆಗಳಿಗೆ ಹೇಮಾವತಿ ನೀರು ಹರಿಸಬೇಕೆಂದು ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸುತ್ತೇನೆ. ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಗೋಶಾಲೆಗಳನ್ನು ಪ್ರಾರಂಭಿಸಿತ್ತು, ಈ ಸರ್ಕಾರ ಗೋಶಾಲೆಗಳನ್ನು ಮುಚ್ಚಿದೆ. ಕೂಡಲೇ ಗೋಶಾಲೆಗಳನ್ನು ತೆರೆದು ಅಗತ್ಯ ಮೇವು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಈಗಾಗಲೇ ರಾಜ್ಯದ ಜನರಿಗೆ ಅನೇಕ ಭಾಗ್ಯಗಳನ್ನು ಕೊಟ್ಟಿದ್ದೇವೆ ಎಂದು ಬೊಬ್ಬೆ ಹೊಡೆಯುತ್ತಿದೆ. ಆದರೆ ರೈತರ ಹಿತಕಾಯುವುದನ್ನು ಮರೆತಿರುವ ಸರ್ಕಾರ ರೈತರಿಗಾಗಿ ಆತ್ಮಹತ್ಯೆ ಭಾಗ್ಯವನ್ನು ಕರುಣಿಸಲಿ. ರೈತರು ಆತ್ಮಹತ್ಯೆ ಮಾಡಿಕೊಂಡರೆ ಇಂತಿಷ್ಟು ಹಣ ಕೊಡುತ್ತೇವೆಂದು ಘೋಷಣೆ ಮಾಡಲಿ ಎಂದು ವ್ಯಂಗ್ಯವಾಡಿದ ಅವರು, ರೈತವಿರೋಧಿ ಸರ್ಕಾರದ ವಿರುದ್ಧ ತುರುವೇಕೆರೆ ಕ್ಷೇತ್ರದ ಕೆರೆಕಟ್ಟೆಗಳಿಗೆ ಹೇಮಾವತಿ ನೀರು ಹರಿಸಬೇಕೆಂದು ಆಗ್ರಹಿಸಿ ಆಗಸ್ಟ್ 10 ರಂದು ಎನ್.ಡಿ.ಎ. ಮೈತ್ರಿ ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಕ್ಷೇತ್ರದ ಎಲ್ಲಾ ರೈತರು, ನಾಗರೀಕರು ಹೆಚ್ಚಿನದಾಗಿ ಪಾಲ್ಗೊಂಡು ನಮ್ಮ ಹಕ್ಕಿಗಾಗಿ, ನಮ್ಮ ನೀರಿಗಾಗಿ ಹೋರಾಡೋಣ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಪ್ರಕಾಶ್, ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಕಡೇಹಳ್ಳಿ ಸಿದ್ದೇಗೌಡ ಸೇರಿದಂತೆ ಬಿಜೆಪಿ, ಜೆಡಿಎಸ್ ನ ಎನ್.ಡಿ.ಎ. ಮೈತ್ರಿಕೂಟದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್


