ಪಾವಗಡ : ತಾಲ್ಲೂಕಿನ ಕೊಡಮಡಗು ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅನುದಾನವನ್ನು ಕೊಳ್ಳೆ ಹೊಡೆಯುತ್ತಿರುವ ದೊಡ್ಡ ಮಟ್ಟದ ಹಗರಣ ಬಯಲಿಗೆ ಬಂದಿದೆ.
೨೦೨೨-೨೩ ರಿಂದ ೨೦೨೫-೨೬ನೇ ಸಾಲಿನ ೧೫ನೇ ಹಣಕಾಸು ಯೋಜನೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ( ಎಸ್ಸಿ /ಎಸ್ಟಿ ) ಅಭಿವೃದ್ಧಿಗಾಗಿ ಬಂದಿದ್ದ ಸರಕಾರದ ಅನುದಾನವನ್ನು ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇರಿಕೊಂಡು ಕಟುಕತನದಿಂದ ಲೂಟಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಬೆಂಕಿ ಕಾರುತ್ತಿದ್ದಾರೆ.
ಹಗರಣದ ಪ್ರಮುಖ ಆರೋಪಗಳು:
೧೫ನೇ ಹಣಕಾಸು ಯೋಜನೆಯಲ್ಲಿ ಲೂಟಿ:
೨೦೨೨-೨೩ ರಿಂದ ೨೦೨೫-೨೬ರವರೆಗಿನ ೧೫ನೇ ಹಣಕಾಸು ಯೋಜನೆಯ ಲಕ್ಷಾಂತರ ರೂಪಾಯಿ ಹಣ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಅಧ್ಯಕ್ಷ ಮತ್ತು ಪಿಡಿಒ ಜೇಬು ಸೇರಿದೆ.
ಎಸ್‌ಸಿ/ಎಸ್‌ಟಿ ಅನುದಾನಕ್ಕೂ ಕನ್ನ: ೨೦೨೨-೨೩ ರಿಂದ ೨೦೨೫-೨೬ರವರೆಗಿನ ಬಡ ದಲಿತ ಹಾಗೂ ಶೋಷಿತ ಸಮುದಾಯಗಳ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಅನುದಾನವನ್ನೂ ಬಿಡದೆ ಅಕ್ರಮವಾಗಿ ಗುಳುಂ ಮಾಡಲಾಗಿದೆ.
ಪಿಡಿಒ-ಅಧ್ಯಕ್ಷನ ಕರಾಳ ಜುಗಲ್ಬಂಧಿ:
ಸಾರ್ವಜನಿಕರ ತೆರಿಗೆ ಹಣವನ್ನು ತಮ್ಮ ಸ್ವಂತ ಆಸ್ತಿಯಂತೆ ಬಳಸಿಕೊಂಡು ಗ್ರಾಮ ಪಂಚಾಯಿತಿಯನ್ನೇ ಭ್ರಷ್ಟಾಚಾರದ ಅಡ್ಡಾವನ್ನಾಗಿ ಮಾಡಿಕೊಂಡಿದ್ದಾರೆ.
"ಗ್ರಾಮದ ಅಭಿವೃದ್ಧಿಗೆ ಬರಬೇಕಿದ್ದ ಹಣವನ್ನು ಅಧಿಕಾರಿ ಮತ್ತು ಜನಪ್ರತಿನಿಧಿ ಸೇರಿ ಕದ್ದು ತಿಂದಿದ್ದಾರೆ.
ಇಂತಹ ಭ್ರಷ್ಟರ ವಿರುದ್ಧ ಕೂಡಲೇ ಹಿರಿಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು."
ಕೊಡಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ
ಸಾರ್ವಜನಿಕರ ಖಡಕ್ ಆಗ್ರಹ:
ಈ ಬೃಹತ್ ಭ್ರಷ್ಟಾಚಾರದ ಕುರಿತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು (ಇಓ) ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಓ) ತಕ್ಷಣವೇ ಎಚ್ಚೆತ್ತುಕೊಳ್ಳಬೇಕು.
ಉನ್ನತ ಮಟ್ಟದ ವಿಶೇಷ ತನಿಖಾ ತಂಡವನ್ನು ರಚಿಸಿ, ಕೊಡಮಡಗು ಪಂಚಾಯಿತಿಯ ದಾಖಲೆಗಳನ್ನು ವಶಕ್ಕೆ ಪಡೆದು, ಲಕ್ಷಾಂತರ ಹಣ ಲೂಟಿ ಮಾಡಿದ ಪಿಡಿಒ ಹಾಗೂ ಅಧ್ಯಕ್ಷನ ವಿರುದ್ಧ ಶಿಸ್ತುಕ್ರಮ ಜರುಗಿಸಿ ಜೈಲಿಗಟ್ಟಬೇಕು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಅಧಿಕಾರಿಗಳು ಈಗಲಾದರೂ ತನಿಖೆಗೆ ಮುಂದಾಗದಿದ್ದರೆ ಮುಂಬರುವ ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ : ಶಿವಾನಂದ


