ರಾಮದುರ್ಗ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ನಿಷ್ಠಾವಂತ ಶಾಸಕ ಅಶೋಕ ಪಟ್ಟಣ ಅವರಿಗೆ ಸಚಿವ ಸ್ಥಾನ ನೀಡದಿರುವ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ಕ್ರಮವನ್ನು ಖಂಡಿಸಿ ಹಾಗೂ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟಿಸಿ ಆಗ್ರಹಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸರಕಾರಿ ಆಸ್ಪತ್ರೆಯ ಮುಂದಿನ ಹುತಾತ್ಮ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಸಚಿವ ಸಂಪುಟದಲ್ಲಿ ಅಶೋಕ ಪಟ್ಟಣ ಅವರನ್ನು ಕೈಬಿಟ್ಟಿರುವದಕ್ಕೆ ಅನೇಕ ಮುಖಂಡರು ಬೇಸರ ವ್ಯಕ್ತಪಡಿಸಿದರು.
ಶಾಸಕ ಅಶೋಕ ಪಟ್ಟಣ ಅವರು ಮೂರು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ, ವಿದ್ಯಾರ್ಥಿ ಹಂತದಿಂದಲೇ ಪಕ್ಷದ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೇ ಅವರ ತಂದೆ ಹಾಗೂ ತಾಯಿಯವರು ಶಾಸಕರಾಗಿ ತಾಲೂಕಿಗೆ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರ ಕುಟುಂಬದಿಂದ ಬಂದಿರುವ ಹಾಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಅಶೋಕ ಪಟ್ಟಣ ಅವರಿಗೆ ಸಚಿವ ಸ್ಥಾನ ನೀಡದೇ ಇರುವದು ತಾಲೂಕಿನ ಕಾರ್ಯಕರ್ತರಿಗೆ ಬೇಸರ ತರಸಿದೆ.
ರಾಮದುರ್ಗ ಹಿಂದುಳಿದ ತಾಲೂಕಾಗಿದ್ದು, ಹಿಂದೆ ಆರ್.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಿರುವದನ್ನು ಹೊರತುಪಡಿಸಿದರೇ ಇಲ್ಲಿಯವರೆಗೂ ತಾಲೂಕಿಗೆ ಸಚಿವ ಸ್ಥಾನ ದೊರೆತಿಲ್ಲ.
ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿದ, ಜಿಲ್ಲೆಯಲ್ಲಿ ಹಿರಿಯ ಶಾಸಕರಾಗಿರುವ ಅಶೋಕ ಪಟ್ಟಣ ಅವರಿಗೆ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಸಚಿವ ಸ್ಥಾನ ನೀಡಬೇಕಿತ್ತು. ಆದರೇ ಸಂಪುಟ ವಿಸ್ತರಣೆಯಲ್ಲಿ ಅವರನ್ನು ಕೈಬಿಟ್ಟಿರುವದು ಕಾರ್ಯಕರ್ತರಿಗೆ ಅತ್ಯಂತ ಬೇಸರ ತರಿಸಿದ್ದು, ಹಿರಿಯ ಶಾಸಕರಾದ ಅಶೋಕ ಪಟ್ಟಣ ಅವರಿಗೆ ಸೂಕ್ತ ಸ್ಥಾನ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ. ರಂಗನಗೌಡ್ರ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರಾದ ರಮೇಶ ಬಂಡಿವಡ್ಡರ, ಬಸವರಾಜ ಪ್ರಧಾನಿ, ಹನಮಂತ ಕುಲಗೋಡ, ರಾಠೋಡ, ಸಾಗರ ಮುನವಳ್ಳಿ, ಸಲೀಂ ಖತೀಬ್, ಸಾಗರ ಜಾಧವ, ವೈಬವ್ ನಲವಡೆ, ಕುಮಾರ , ಮೋಹಿತ ರಾಯಬಾಗ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಮಂಜುನಾಥ ಕಲಾದಗಿ


