ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆ. ೧೭ರಿಂದ ಅಕ್ಟೋಬರ್ ೧೭ರವರೆಗೆ ದೇಶಾದ್ಯಂತ ‘ಸೇವಾ ಸಂಕಲ್ಪ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ಬಿಜೆಪಿ ನೇತೃತ್ವದಲ್ಲಿ ನಡೆಯಲಿರುವ ಈ ಅಭಿಯಾನದಲ್ಲಿ ಎನ್‌ಡಿಎ ಅಂಗಪಕ್ಷಗಳೂ ಭಾಗವಹಿಸಲಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಸಿಎಂ ಹಾಗೂ ಪ್ರಧಾನಿಯಾಗಿ ಸುದೀರ್ಘ ಅವಧಿಯ ಸಾರ್ವಜನಿಕ ಸೇವೆ, ಆಡಳಿತದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಯೋಜನೆಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
‘ಜನಸೇವೆಯೇ ಪ್ರಭುಸೇವೆ’ ಎಂಬ ಧ್ಯೇಯವಾಕ್ಯದೊಂದಿಗೆ ಸೇವಾ ಸಪ್ತಾಹ ಆಚರಿಸಲಾಗುವುದು. ಸೆಪ್ಟೆಂಬರ್ ೧೭ರಂದು ಪ್ರಧಾನಿ ಮೋದಿ ಅವರ ಜನ್ಮದಿನದ ಪ್ರಯುಕ್ತ ಪ್ರತಿ ಮನೆ ಮುಂದೆ ‘ಆಶೀರ್ವಾದ ದೀಪ’ ಬೆಳಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
೨೦೪೭ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವ ಗುರಿಯ ಕುರಿತು ಅಭಿಯಾನದ ಸಂದರ್ಭದಲ್ಲಿ ಚರ್ಚಿಸಲಾಗುವುದು. ದೇಶದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿದ್ದು, ಗ್ರಾಮೀಣ ಪ್ರದೇಶಗಳೂ ಡಿಜಿಟಲ್ ಸಂಪರ್ಕದ ವ್ಯಾಪ್ತಿಗೆ ಬಂದಿವೆ. ಭಾರತದಲ್ಲಿ ಜಗತ್ತಿನ ಪ್ರಮುಖ ಮೆಟ್ರೋ ಜಾಲವಿದೆ. ದೇಶದ ಆರ್ಥಿಕತೆಯೂ ಜಾಗತಿಕ ಸವಾಲುಗಳ ನಡುವೆಯೂ ಸದೃಢವಾಗಿದೆ ಎಂದು ಹೇಳಿದರು.
ಭಾರತದ ಜಿಡಿಪಿ ಅಂಕಿ-ಅAಶಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ದೇಶದ ಆರ್ಥಿಕ ಪ್ರಗತಿಯನ್ನು ಗಮನಿಸಿ ಜಗತ್ತಿನ ಹಲವು ರಾಷ್ಟ್ರಗಳ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ಭಾರತದ ರಫ್ತು ಪ್ರಮಾಣವೂ ಹೆಚ್ಚಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಈ ಹಿಂದೆ ಭಾವನಾತ್ಮಕ ರಾಜಕಾರಣಕ್ಕೆ ಒತ್ತು ನೀಡುತ್ತಿತ್ತು. ಆದರೆ ಬಿಜೆಪಿ ಇದೀಗ ಕಾರ್ಯಕ್ಷಮತೆ ಮತ್ತು ಅಭಿವೃದ್ಧಿ ಆಧಾರಿತ ರಾಜಕಾರಣ ಮಾಡುತ್ತಿದೆ ಎಂದು ಪ್ರಲ್ಹಾದ್ ಜೋಶಿ ಟೀಕಿಸಿದರು.
ರೈತರ ಹಿತ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕಬ್ಬಿನ ಎಫ್‌ಆರ್‌ಪಿ ದರವನ್ನು ಪ್ರತಿವರ್ಷ ಹೆಚ್ಚಿಸಲಾಗುತ್ತಿದೆ. ದೇಶದಲ್ಲಿ ಎಥೆನಾಲ್ ಉತ್ಪಾದನೆಯೂ ಹೆಚ್ಚಾಗಿದೆ. ಮಳೆ ಕೊರತೆಯಿಂದ ಕೆಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಅದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು.
ದೇಶದ ೮೧ ಕೋಟಿ ಜನರಿಗೆ ಪ್ರತಿ ತಿಂಗಳು ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಕಠಿಣ ಪರಿಸ್ಥಿತಿ ಇದ್ದರೂ ಭಾರತದ ಆರ್ಥಿಕತೆ ಸದೃಢವಾಗಿದೆ. ಬ್ರಿಕ್ಸ್ ಸಭೆಯಲ್ಲಿಯೂ ಭಾರತದ ಆರ್ಥಿಕ ಸ್ಥಿತಿಯನ್ನು ಹಲವು ರಾಷ್ಟ್ರಗಳು ಮೆಚ್ಚಿಕೊಂಡಿವೆ ಎಂದು ಹೇಳಿದರು.
ರಾಜ್ಯ ಸರ್ಕಾರದ ನಾಯಕರು ತಡವಾಗಿ ಎಚ್ಚೆತ್ತುಕೊಂಡಿದ್ದು, ಪ್ರಧಾನಮಂತ್ರಿ ಕುಸುಮ್ ಯೋಜನೆಯನ್ನು ಇದೀಗ ಜಾರಿಗೊಳಿಸುತ್ತಿದ್ದಾರೆ ಎಂದು ಟೀಕಿಸಿದ ಅವರು, ದೇಶದ ಅಭಿವೃದ್ಧಿ ಹಾಗೂ ಸಾಧನೆಗಳ ವಿರುದ್ಧ ಮಾತನಾಡುವುದು ಕಾಂಗ್ರೆಸ್‌ನ ಭಾಗವಾಗಿದೆ ಎಂದು ಆರೋಪಿಸಿದರು.
ಸೆಪ್ಟೆಂಬರ್ ೧೭ರಿಂದ ಅಕ್ಟೋಬರ್ ೧೭ರವರೆಗೆ ನಡೆಯಲಿರುವ ‘ಸೇವಾ ಸಂಕಲ್ಪ’ ಅಭಿಯಾನದ ಮೂಲಕ ಜನಸೇವೆ, ಅಭಿವೃದ್ಧಿ ಹಾಗೂ ವಿಕಸಿತ ಭಾರತದ ಸಂಕಲ್ಪವನ್ನು ಜನರಿಗೆ ತಲುಪಿಸಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಲಿಂಗರಾಜ ಪಾಟೀಲ, ಉಭಯ ಜಿಲ್ಲಾ ಅಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಶಿವು ಮೆಣಸಿನಕಾಯಿ, ಸಂಜಯ ಕಪಟಕರ, ವಸಂತ ನಾಡಜೋಶಿ, ರಾಜು ಕೋರ್ಯಾಣಮಠ ಇತರರಿದ್ದರು.
ವರದಿ:ಸುಧೀರ್ ಕುಲಕರ್ಣಿ


