ಬೆಂಗಳೂರು : ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಐಕ್ಯತೆ, ಭಕ್ತಿ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇಂತಹ ಜಾತ್ರಾ ಮಹೋತ್ಸವಗಳು ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉತ್ತಮ ವೇದಿಕೆಯಾಗಿವೆ," ಎಂದು ಶಾಸಕ ಎಸ್ ಮುನಿರಾಜು ಹೇಳಿದರು.
ಟಿ. ದಾಸರಹಳ್ಳಿಯ ಕೆಂಪೇಗೌಡ ನಗರದ ಮಹೇಶ್ವರಿ ದೇವಾಲಯದ ಸಮೀಪದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಚಾಮುಂಡೇಶ್ವರಿ ಅಮ್ಮನವರ 9ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು ಅವರು ಮಾತನಾಡಿದರು.
ಸಮಾಜ ಸೇವಕ ಪ್ರಭಾವಿ ಮುಖಂಡ ಡಾ. ಕಾಳೇಗೌಡರು ಶ್ರೀ ಚಾಮುಂಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅಮ್ಮನವರಿಗೆ ವಿಶೇಷ ಪೂಜಾ ಪುನಸ್ಕಾರ ಸಲ್ಲಿಸಿ ಮಾತನಾಡಿದ ಅವರು, "ದೇವಾಲಯಗಳು ಧಾರ್ಮಿಕ ಕೇಂದ್ರಗಳಷ್ಟೇ ಅಲ್ಲ, ಸಮಾಜ ಸೇವೆಯ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಂದ ಜನರಲ್ಲಿ ಧಾರ್ಮಿಕ ನಂಬಿಕೆ ಜೊತೆಗೆ ಸಾಮಾಜಿಕ ಸೇವೆಯ ಮನೋಭಾವನೆ ಬೆಳೆಸುತ್ತವೆ," ಎಂದು ಅಭಿಪ್ರಾಯಪಟ್ಟರು.
ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀಮತಿ ಕಮಲಾಕ್ಷಿ (ರಾಣಿ) ಹಾಗೂ ಶ್ರೀ ರವಿಕುಮಾರ ಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಅಭಿಷೇಕ, ಕಳಶಾರಾಧನೆ, ಪೀಠಾರೋಹಣ ಹೋಮ, ಅಮ್ಮನವರ ಜನ್ಮ ದಿನೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಈ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಾರ್ವಜನಿಕರಿಗೆ ಕನ್ನಡಕ ವಿತರಣೆ, ಬಡ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ಹಾಗೂ ಪುಸ್ತಕಗಳ ವಿತರಣೆ, ಸಾಂಪ್ರದಾಯಿಕ ಕೋಲಾಟ ಸೇರಿದಂತೆ ಹಲವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಸುನೀಲ್, ಕೆಂಪೇಗೌಡ, ಓಮೇಶ್, ಮೋಹನ, ವಿಜಿ, ಅರವಿಂದ್, ಅಭಯ ಕೃಷ್ಣ ಸೇರಿದಂತೆ ಭಕ್ತರು ಮುಖಂಡರು ಸಮಸ್ತ ನಾಗರಿಕರು ಮುಂತಾದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್


