ವಿಜಯನಗರ : ಗಣೇಶ ಚತುರ್ಥಿಯ ಸಂಭ್ರಮದ ನಡುವೆಯೇ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡಗು ಗ್ರಾಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.
ಗ್ರಾಮದ ರೈತ ಬಸವರಾಜ್ ಪಾಲ್ತೂರ್ ಎಂಬುವವರ ತೋಟದಲ್ಲಿ ಬೆಳೆದ ಪಪ್ಪಾಯಿ ಹಣ್ಣಿನಲ್ಲಿ ವಿನಾಯಕನ ಆಕೃತಿ ಪತ್ತೆಯಾಗಿದೆ.
ಸಹೋದರನಿಗೆ ನೀಡಲು ತೋಟದಿಂದ ಕಿತ್ತು ತಂದಿದ್ದ ಪಪ್ಪಾಯಿಯನ್ನು ಗಮನಿಸಿದಾಗ ಅದರಲ್ಲಿ ಸ್ಪಷ್ಟವಾಗಿ ಗಣೇಶನ ರೂಪ ಗೋಚರಿಸಿದ್ದು, ಇದನ್ನು ಕಂಡ ರೈತ ಕುಟುಂಬ ಮತ್ತು ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ.
ಹಲವು ವರ್ಷಗಳಿಂದ ಮನೆಗೆ ಗಣೇಶನ ಮೂರ್ತಿ ತರಲು ಸಾಧ್ಯವಾಗದಿದ್ದ ಈ ಕುಟುಂಬಕ್ಕೆ, ಹಣ್ಣಿನ ರೂಪದಲ್ಲೇ ವಿಘ್ನನಿವಾರಕ ಒಲಿದು ಬಂದಂತಾಗಿದೆ.
ಈ ವಿಸ್ಮಯಕಾರಿ ಘಟನೆಯಿಂದ ಹರ್ಷಗೊಂಡ ಬಸವರಾಜ್ ಅವರ ಕುಟುಂಬಸ್ಥರು, ಆ ಪಪ್ಪಾಯಿ ಹಣ್ಣನ್ನೇ ಪವಿತ್ರ ಗಣಪತಿಯ ಸ್ವರೂಪವೆಂದು ಭಾವಿಸಿ ಶಾಸ್ತ್ರೋಕ್ತವಾಗಿ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದ್ದಾರೆ.
ಈ ಮೂಲಕ ಪಾಲ್ತೂರ್ ಕುಟುಂಬದಲ್ಲಿ ಹಲವು ವರ್ಷಗಳ ಬಳಿಕ ಮತ್ತೆ ಗಣೇಶೋತ್ಸವದ ಅದ್ಧೂರಿ ಸಂಭ್ರಮ ಮನೆಮಾಡಿದೆ.


