ಬೈಲಹೊಂಗಲ : ಜಮ್ಮು-ಕಾಶ್ಮೀರದ ಕಾರ್ಗೀಲ್ ಪ್ರದೇಶದಲ್ಲಿ ನಡೆದ ಹೋರಾಟದಲ್ಲಿ ಅನೇಕ ಯೋಧರು ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದು ಅಂಥವರು ಸಮಾಜದಲ್ಲಿ ಸದಾ ಸ್ಮರಣೀಯವಾಗಿದ್ದಾರೆಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಅವರು ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ತಾಲೂಕಾ ಮಾಜಿ ಸೈನಿಕರ ಸಮನ್ವಯ ಸಮೀತಿ ಅಡಿಯಲ್ಲಿ ರವಿವಾರ ನಡೆದ 27 ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ನಮ್ಮ ರಾಷ್ಟ್ರದ ಸೈನಿಕ ಇಲಾಖೆಯು ಇಡೀ ಜಗತ್ತಿಗೆ ಮಾದರಿಯಾಗಿದೆ. ಸ್ವದೇಶದ ಸ್ವಾಭಿಮಾನದ ಜೊತೆಗೆ ಕರ್ತವ್ಯ ಬದ್ದತೆ ಮೆರೆದ ಸಾಕಷ್ಟು ಸೈನಿಕರು ಪಾಣ ತ್ಯಾಗ ಮಾಡಿದ್ದಾರೆ. ವಿಜಯೋತ್ಸವ ಕಾರ್ಯದಲ್ಲಿ ಆ ಕುಟುಂಬಗಳ ಬಗ್ಗೆಯೂ
ಚಿಂತನೆ ನಡೆಯಲಿ ಎಂದರು.
ನ್ಯಾಯವಾದಿ ಎಪ್.ಎಸ್.ಸಿದ್ದನಗೌಡರ ಮಾತನಾಡಿ, ಕಾರ್ಗೀಲ್ ಕಾರ್ಯಾಚರಣೆಯ ಮಹಾಯುದ್ದದಲ್ಲಿ ರಾಜ್ಯದ 13 ಸೈನಿಕರಲ್ಲಿ ಬೆಳಗಾವಿ ಜಿಲ್ಲೆಯ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ.
ದೇಶ ಸೇವೆಗಾಗಿ ತಮ್ಮ ಮಕ್ಕಳನ್ನು ಹೆತ್ತು ಜವಾಬ್ದಾರಿ ಮೆರೆದ ತಾಯಂದಿರ ಪಾತ್ರವೂ ಕೂಡಾ ಅತ್ಯಂತ ಮಹತ್ವದ್ದಾಗಿದೆ. ಯುವಕರು ಸೈನ್ಯ ಸೇರಿ ರಾಷ್ಟ್ರದ
ಘಣತೆ ಹೆಚ್ಚಿಸಲು ಪ್ರಯತ್ನಿಸಬೇಕೆಂದರು.
ದಿವ್ಯ ಸಾನಿಧ್ಯ ವಹಿಸಿದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವೇ.ಮೂ. ಬಸಯ್ಯ ಶಾಸ್ತ್ರೀ ಹಿರೇಮಠ ಮಾತನಾಡಿ, ಕಾರ್ಗೀಲ್ ವಿಜಯೋತ್ಸದಲ್ಲಿ ಸೈನಿಕರ ಗೆಲವು ಇದು ದೇಶದ ಗೆಲವಾಗಿದೆ. ರಾಷ್ಟ್ರದ ಗಡಿಯಲ್ಲಿ ಹಗಲಿರುಳು ಮಳೆ-ಚಳಿ ಎನ್ನದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಯೋಧರ ತ್ಯಾಗ-ಬಲಿದಾನ ಭೂಮಿಯ ಮೇಲೆ ಸದಾ ಅಜರಾಮರ ಎಂದರು.
ತಾಲೂಕಾ ಮಾಜಿ ಸೈನಿಕರ ಸಮನ್ವಯ ಸಮೀತಿಯ ಅಧ್ಯಕ್ಷ ಬಿ.ಬಿ.ಬೋಗೂರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಚನ್ನಮ್ಮನ ಕಿತ್ತೂರು ಸಿಪಿಐ ಶಿವಾನಂದ ಗುಡುಗನಟ್ಟಿ, ಜೆಡಿಎಸ್ ಮುಖಂಡ ಶಂಕರ ಮಾಡಲಗಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮಹಾಂತೇಶ ತುರಮರಿ, ವಿಶ್ವ ಹಿಂದೂ ಪರಿಷತ್ತಿನ್ ಜಿಲ್ಲಾಧ್ಯಕ್ಷರಾದ ಪ್ರಮೋದಕುಮಾರ ವಕ್ಕುಂದಮಠ, ಸೋಮೇಶ್ವರ ಸಕ್ಕರೆ ಕಾರ್ಖಾನೆಯ ನಿರ್ಧೇಶಕ ಮಹಾಂತೇಶ ಮತ್ತಿಕೊಪ್ಪ, ಮಲ್ಲಿಕಾರ್ಜುನ ಹುಂಬಿ, ಸಂಘಧ ಉಪಾಧ್ಯಕ್ಷರಾದ ಚಂದ್ರಶೇಖರ್ ನೇಸರಗಿ ಮಹಾಂತೇಶ ಪಾಟೀಲ ವೇದಿಕೆ ಮೇಲಿದ್ದರು.
ವೈಧ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ವೈಧ್ಯ ವಿದ್ಯಾರ್ಥಿಗಳಾದ ಶ್ವೇತಾ ನಾವಲಗಟ್ಟಿ, ನಾಗೇಶ ಹಿರೇಮಠ, ಕಾರ್ತಿಕ್ ಗಡದವರ, ಚೇತನ ಗಡದವರ, ಅಕ್ಷತಾ
ಮಾವಿನಕಟ್ಟಿ, ಲಕ್ಷ್ಮೀ ಶಿರಗಾಂವಿ, ರೋಶನ ಕಂಬಾರ ಹಾಗೂ ಕಾರ್ಗೀಲ್ ಯುದ್ದದಲ್ಲಿ ಹೋರಾಡಿ ವೀರ ಮರಣನಪ್ಪಿದ ಸೈನಿಕರ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ತಾಲೂಕಾ ಮಾಜಿ ಸೈನಿಕರ ಸಮನ್ವಯ ಸಮೀತಿಯ ಸರ್ವ ಸದಸ್ಯರು, ವೀರ ನಾರಿಯರು ಉಪಸ್ಥಿತರಿದ್ದರು.
ಮಕ್ಕಳಿಂದ ಸಾಂಸ್ಕ್ರತಿಕ, ದೇಶ ಭಕ್ತಿಗೀತೆಗಳ ಕಾರ್ಯಕ್ರಮ ಜರುಗಿದವು. ಇದಕ್ಕೂ ಮೊದಲು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಶಾಸಕ ಮಹಾಂತೇಶ
ಕೌಜಲಗಿ ಮಾಲಾರ್ಪಣೆ ಮಾಡಿ ನಂತರ ಮಾಜಿ ಸೈನಿಕರಿಂದ ಎರ್ಪಡಿಸಿದ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಸರಸ್ವತಿ ಪಟ್ಟೇದ ಸ್ವಾಗತಿಸಿದರು. ಪ್ರಕಾಶ ನಾಯ್ಕರ ನಿರೂಪಿಸಿದರು.
ವರದಿ : ದುಂಡಪ್ಪ ಹೂಲಿ


