ಬೆಂಗಳೂರು: ಕನ್ನಡ (Sandalwood) ಚಿತ್ರರಂಗದ ಹೆಮ್ಮೆಯ ನಟ, 'ರಾಕಿಂಗ್ ಸ್ಟಾರ್' ಯಶ್ (Actor Yash) ಅಭಿನಯದ ಬಹುನಿರೀಕ್ಷಿತ ಆಕ್ಷನ್ ಆಧಾರಿತ 'ಟಾಕ್ಸಿಕ್' (Toxic) ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಸುನಾಮಿ ಎಬ್ಬಿಸಿದೆ.
ಗೀತು ಮೋಹನ್ ದಾಸ್ ನಿರ್ದೇಶನದ ಈ ಸಿನಿಮಾ ಪ್ರದರ್ಶನ ಕಂಡ ಮೊದಲ ದಿನವೇ ಭಾರತೀಯ ಚಿತ್ರರಂಗದ ದಾಖಲೆಗಳನ್ನು ಧೂಳೀಪಟ ಮಾಡಿದ್ದು, ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಭಾರಿ ಬಂಪರ್ ಗಳಿಕೆ ಮಾಡಿದೆ.
ಆಂಧ್ರದಲ್ಲಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾ
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ದೂರಿಯಾಗಿ ನಿರ್ಮಾಣಗೊಂಡಿರುವ 'ಟಾಕ್ಸಿಕ್' ಸಿನಿಮಾ, ಕೇವಲ ತೆಲುಗು ರಾಜ್ಯಗಳಲ್ಲೇ (ಆಂಧ್ರಪ್ರದೇಶ ಮತ್ತು ತೆಲಂಗಾಣ) ಮೊದಲ ದಿನ 20 ಕೋಟಿ ರೂಪಾಯಿಗೂ ಅಧಿಕ ಒಟ್ಟು ಗಳಿಕೆ (Gross) ಕಂಡಿದೆ. ಈ ಮೂಲಕ ತೆಲುಗು ಮಾರುಕಟ್ಟೆಯಲ್ಲಿ ಮೊದಲ ದಿನವೇ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ಕನ್ನಡ ಸಿನಿಮಾ ಎಂಬ ಅಭೂತಪೂರ್ವ ಇತಿಹಾಸವನ್ನು ತನ್ನದಾಗಿಸಿಕೊಂಡಿದೆ.


