ಬೆಂಗಳೂರು : ಸಂಗೀತ ಕ್ಷೇತ್ರದ ದಂತಕಥೆ, 'ಭಾರತ ರತ್ನ' ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110 ನೇ ಜಯಂತ್ಯುತ್ಸವದ ಅಂಗವಾಗಿ ನಗರದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಗಾನ ಸುಧೆಯನ್ನು ಆಲಿಸುತ್ತಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, 'ಭಕ್ತಿ'ಯನ್ನು ಕರ್ನಾಟಿಕ್ ಸಂಗೀತದ "ಜೀವಕೋಶ" (Living soul) ಎಂದು ಬಣ್ಣಿಸಿದರು. ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ರೂಪಿಸುವಲ್ಲಿ ವಿವಿಧ ಭಾಷೆಗಳು ಹಾಗೂ ಧಾರ್ಮಿಕ ಚೌಕಟ್ಟುಗಳು ವಹಿಸಿದ ಪ್ರಮುಖ ಪಾತ್ರವನ್ನು ಅವರು ಉಲ್ಲೇಖಿಸಿದರು.
"ಕರ್ನಾಟಿಕ್ ಸಂಗೀತದಲ್ಲಿರುವ ಭಕ್ತಿಯು ಈ ಪರಂಪರೆಯ ಜೀವಂತ ಆತ್ಮವಾಗಿದೆ. ಇದು ಪ್ರಮುಖ ಭಾಷೆಗಳ ಭವ್ಯ ಸಂಗಮದ ಮೂಲಕ ಸದಾ ಜೀವಂತವಾಗಿ ಸಾಗಿದೆ.
ಒಂದೇ ಸಂಗೀತ ಕಚೇರಿಯಲ್ಲಿ, ವಿವಿಧ ಭಾಷಿಕ ಮತ್ತು ಆಧ್ಯಾತ್ಮಿಕ ಪರಂಪರೆಗಳು ನದಿಗಳು ಸಾಗರವನ್ನು ಸೇರುವಂತೆ ಒಂದಾಗಿ ಹರಿಯುತ್ತವೆ" ಎಂದು ಸಚಿವೆ ಹೇಳಿದರು.
ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡ ಭಕ್ತಿ ಪರಂಪರೆಯು 12, 13 ಮತ್ತು 14 ನೇ ಶತಮಾನಗಳಲ್ಲಿ ಉತ್ತರ ಭಾರತಕ್ಕೂ ಪಸರಿಸಿತು ಮತ್ತು ಇದು ಹಿಂದುಸ್ತಾನಿ ಭಜನೆಗಳ ಮೇಲೆಯೂ ಪ್ರಭಾವ ಬೀರಿದೆ ಎಂದರು.
ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಕಠಿಣ ಸಂಗೀತ ಅಭ್ಯಾಸ, ವಿನಯತೆ ಹಾಗೂ ಕಲೆಯ ಮೇಲಿದ್ದ ನಿಷ್ಠೆಯನ್ನು ಸಚಿವೆ ನೆನಪಿಸಿಕೊಂಡರು. "ಅವರ ಗಾಯನ ಪ್ರತಿಭೆಯು ಕಠಿಣ ಬೌದ್ಧಿಕ ಶಿಸ್ತನ್ನು ಆಧರಿಸಿತ್ತು.
ತಮ್ಮ ಅಪಾರ ಸಾಧನೆಯ ಹೊರತಾಗಿಯೂ ಅವರು ಕೊನೆಯವರೆಗೂ ತಮ್ಮನ್ನು ಸಂಗೀತ ವಿದ್ಯಾರ್ಥಿಯೆಂದೇ ಪರಿಭಾವಿಸಿದ್ದರು" ಎಂದರು.


