ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ಅಭಿನೇತ್ರಿ ಲಕ್ಷ್ಮೀದೇವಿ ಅವರು ನಿಧನರಾಗಿದ್ದಾರೆ ಎಂಬ ವದಂತಿಗೆ ಕುಟುಂಬದವರು ಸ್ಪಷ್ಟನೆ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹರಡಿದ್ದ ಸುಳ್ಳು ಸುದ್ದಿಯನ್ನು ಮೊಮ್ಮಗಳು ದೀಪಿಕಾ ಶರಣ್ ಅವರು ತಳ್ಳಿಹಾಕಿದ್ದಾರೆ. 'ಲಕ್ಷ್ಮೀದೇವಿ ಅವರು ಆರೋಗ್ಯವಾಗಿದ್ದಾರೆ.
ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ' ಎಂದು ಅವರು ಮನವಿ ಮಾಡಿದ್ದಾರೆ. ಲಕ್ಷ್ಮೀದೇವಿ ಅವರಿಗೆ 92 ವರ್ಷ ವಯಸ್ಸಾಗಿದೆ. ಅವರು ನಿಧನರಾಗಿಲ್ಲ ಎಂಬ ವಿಷಯವನ್ನು ಕುಟುಂಬದವರು ಖಚಿತಪಡಿಸಿದ್ದಾರೆ. ವಿಡಿಯೋ ಮೂಲಕ ಲಕ್ಷ್ಮೀದೇವಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಹಿರಿಯ ಕಲಾವಿದರ ಬಗ್ಗೆ ಆಗಾಗ ಸುಳ್ಳು ಸುದ್ದಿ ಹಬ್ಬಿಸಲಾಗುತ್ತದೆ.
ಈ ಹಿಂದೆ ಹಿರಿಯ ನಟ ದೊಡ್ಡಣ್ಣ ಅವರ ಬಗ್ಗೆ ಕೂಡ ಇಂಥ ಫೇಕ್ ನ್ಯೂಸ್ ಹರಿದಾಡಿತ್ತು. ಅವರು ಕೂಡ ಸ್ವತಃ ಸ್ಪಷ್ಟನೆ ನೀಡುವ ಮೂಲಕ ಸುಳ್ಳು ಸುದ್ದಿಯನ್ನು ತಳ್ಳಿಹಾಕಿದ್ದರು. ಈಗ ಲಕ್ಷ್ಮೀದೇವಿ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ.
ಕಪ್ಪು-ಬಿಳುಪು ಕಾಲದಿಂದಲೂ ಲಕ್ಷ್ಮೀದೇವಿ ಅವರು ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಸುಮಾರು 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದ ಖ್ಯಾತಿ ಅವರಿಗೆ ಸಲ್ಲುತ್ತದೆ. ವಿವಿಧ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳ ಮೂಲಕ ಅವರು ಮನರಂಜನೆ ನೀಡಿದ್ದಾರೆ.
ಲಕ್ಷ್ಮೀದೇವಿ ಅವರು 'ಶ್ರೀನಿವಾಸ ಕಲ್ಯಾಣ' ಚಿತ್ರದ ಮೂಲಕ ತಮ್ಮ ಅಭಿನಯದ ಪಯಣವನ್ನು ಆರಂಭಿಸಿದರು. ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ಅಭಿನಯಿಸಿದ ಹಿರಿಮೆ ಅವರದ್ದಾಗಿದೆ. '
ಭಕ್ತ ಕನಕದಾಸ', 'ಬಂಗಾರದ ಮನುಷ್ಯ', ಹಾಗೂ 'ವೀರ ಕೇಸರಿ' ರೀತಿಯ ಅತ್ಯಂತ ಯಶಸ್ವಿ ಮತ್ತು ಐತಿಹಾಸಿಕ ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಗುರುತಿಸಿಕೊಂಡಿದ್ದಾರೆ.


