ತುರುವೇಕೆರೆ: ರಾಜ್ಯದ ರೈತರಿಗೆ ಅನ್ಯಾಯ ಮಾಡಿ ತಮಿಳುನಾಡಿಗೆ ನೀರು ಹರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಕೂಡಲೇ ನೀರು ನಿಲ್ಲಿಸದಿದ್ದರೆ ಸಹಸ್ರಾರು ರೈತರೊಡಗೂಡಿ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರುನಾಡ ವಿಜಯಸೇನೆ ತಾಲ್ಲೂಕು ಅಧ್ಯಕ್ಷ ಕೃಷ್ಣಮೂರ್ತಿ ಎಚ್ಚರಿಸಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ಉಪತಹಸೀಲ್ದಾರ್ ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಮಳೆಯಿಲ್ಲದೆ ರಾಜ್ಯವೆಲ್ಲಾ ಬರಪೀಡಿತವಾಗಿದೆ. ತುರುವೇಕೆರೆ ತಾಲ್ಲೂಕಿನಲ್ಲೂ ಮಳೆ ಇಲ್ಲದೆ ಕೆರೆಕಟ್ಟೆಗಳೆಲ್ಲಾ ಬತ್ತಿದೆ. ತಾಲೂಕಿನ ಶಾಸಕರಾದ ಎಂ.ಟಿ.ಕೃಷ್ಣಪ್ಪನವರು ತುರುವೇಕೆರೆ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರಾಜ್ಯದ ಹಿತಾಸಕ್ತಿ ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸುತ್ತಿರುವುದು ರೈತರಿಗೆ ಮಾಡಿದ ದ್ರೋಹ ಎಂದು ಕಿಡಿಕಾರಿದರು.
ಹಾಸನದ ಗೊರೂರು ಡ್ಯಾಂನಿಂದ ಬರುವ ಹೇಮಾವತಿ ನದಿ ನೀರೇ ತಿಪಟೂರು, ತುರುವೇಕೆರೆ, ಗುಬ್ಬಿ ಹಾಗೂ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಹೇಮಾವತಿ ನೀರನ್ನು ಜಿಲ್ಲೆಯ ಕೆರೆಕಟ್ಟೆಗೆ ತುಂಬಿಸುವುದನ್ನು ಬಿಟ್ಟು ಹೇಮಾವತಿ ಜಲಾಶಯದ ನೀರನ್ನು ಕಾವೇರಿ ಜಲಾಶಯಕ್ಕೆ ಬಿಟ್ಟುಕೊಂಡು ತಮಿಳುನಾಡಿಗೆ ಹರಿಸುತ್ತಿರುವುದು ನಾಡಿನ ಜನತೆಗೆ, ರೈತರಿಗೆ ಮಾಡಿರುವ ಅನ್ಯಾಯ ಎಂದರು.
ಕೂಡಲೇ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ತುರುವೇಕೆರೆ ತಾಲ್ಲೂಕಿನ ಬರಪೀಡಿತ ಎಂದು ಘೋಷಿಸಬೇಕು. ಇಲ್ಲವಾದರೆ ತಾಲೂಕಿನ ಸಂಘ ಸಂಸ್ಥೆಗಳು, ರೈತರೊಡಗೂಡಿ ಪ್ರತಿಭಟನೆ ನಡೆಸಲಾಗುವುದೆಂದರು.
ಈ ಸಂದರ್ಭದಲ್ಲಿ ರೈತ ಸಂಘದ ಶ್ರೀನಿವಾಸಗೌಡ, ಬೀದಿಬದಿ ವ್ಯಾಪಾರಿಗಳ ಸಂಘದ ಮಾರುತಿ, ಸಿಐಟಿಯು ಸತೀಶ್, ಕರುನಾಡ ವಿಜಯಸೇನೆ ಸಂಘಟನೆಯ ಪದಾಧಿಕಾರಿಗಳು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


