ಮಾನ್ವಿ: ರಕ್ಷಾ ಬಂಧನವು ಅಣ್ಣ-ತಂಗಿ, ಅಕ್ಕ-ತಮ್ಮನ ನಡುವಿನ ಸಹೋದರತ್ವದ ಭಾವನೆಯನ್ನು ಗಟ್ಟಿಗೊಳಿಸಿದರೆ, ‘ವೃಕ್ಷ ಬಂಧನ’ವು ಮನುಷ್ಯ ಮತ್ತು ಪರಿಸರದ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ನೇತಾಜಿ ಪ.ಪೂ. ಕಾಲೇಜಿನ ಆಡಳಿತಾಧಿಕಾರಿ ಡಾ. ಕೆ. ವಿನಯಾ ಹೇಳಿದರು.
ನೇತಾಜಿ ಶಿಕ್ಷಣ ಸಂಸ್ಥೆಯ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಕ್ಷಾ ಬಂಧನ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಮನುಷ್ಯ-ಮನುಷ್ಯನ ನಡುವಿನ ಸಂಬಂಧದ ಜೊತೆಗೆ ಮನುಷ್ಯ ಮತ್ತು ಪರಿಸರದ ನಡುವೆಯೂ ಉತ್ತಮ ಬಾಂಧವ್ಯ ಬೆಸೆಯುವ ಅಗತ್ಯವಿದೆ. ಈ ಉದ್ದೇಶದಿಂದ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ರಕ್ಷಾ ಬಂಧನ ಕಟ್ಟುವುದರ ಜೊತೆಗೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿರುವ ಗಿಡ-ಮರಗಳಿಗೆ ರಕ್ಷಾ ಬಂಧನ ಕಟ್ಟುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ರಕ್ಷಾ ಬಂಧನ ಕಟ್ಟಲಾಯಿತು. ಇದೇ ವೇಳೆ ಶಾಲಾ ಆವರಣದಲ್ಲಿರುವ ಗಿಡ-ಮರಗಳಿಗೂ ರಕ್ಷಾ ಬಂಧನ ಕಟ್ಟುವ ಮೂಲಕ ‘ವೃಕ್ಷ ಬಂಧನ’ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಈ. ನರಸಿಂಹ, ಕೆ. ವಿಜಯಲಕ್ಷ್ಮಿ, ಕೆ. ರಾಜಾ ರವಿವರ್ಮ, ಅನೀಸ್ ಫಾತಿಮಾ, ಬಸವರಾಜ, ರಹಿಂಪಾಷಾ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.
ವರದಿ : ಆಂಜನೇಯ ನಸಲಾಪುರ


