ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸರ್ ಜಗದೀಶ ಚಂದ್ರ ಭೋಸ್ ಇಕೋ ಕ್ಲಬ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮದ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. ಪರಿಸರ ಜಾಗೃತಿ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶಾಲಾ ಕೈತೋಟದಲ್ಲಿ ಬಿತ್ತನೆ ಕಾರ್ಯಕ್ಕೆ ಚಾಲನೆ ಕೊಡಲಾಯಿತು.
ನೋಡಲ್ ಶಿಕ್ಷಕಿಯರಾದ ಹೇಮಲತಾ ಪುರಾಣಿಕ ಮಾತನಾಡಿ ಪರಿಸರ ರಕ್ಷಣೆ ಬಗ್ಗೆ ನಮಗೆಲ್ಲ ಅರಿವಿರಬೇಕು. ಪ್ಲಾಸ್ಟಿಕ್ ಬದಲಿಗೆ ಪರ್ಯಾಯ ವಸ್ತುಗಳನ್ನು ಬಳಸಬೇಕು. ನೀರನ್ನು ಪೋಲು ಮಾಡಬಾರದು ಎಂದು ಹೇಳಿದರು.ವಿದ್ಯಾರ್ಥಿಗಳಾದ ಪಲ್ಲವಿ ಸೂರ್ಯವಂಶಿ, ವಿದ್ಯಾ ಗರಗದ ಪರಿಸರ ದಿನದ ಉದ್ದೇಶ, ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ, ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಶಿವಾನಂದ ಬಳಿಗಾರ, ವಿಠ್ಠಲ ಕೋಟಗಾರ, ಗಾಯತ್ರಿ ತುರಾದಿ, ಸಿಬ್ಬಂದಿಗಳಾದ ಜ್ಯೋತಿ ಅಳಗೋಡಿ, ಮಹಾದೇವಿ ಸೊಗಲದ, ಗಂಗವ್ವ ಅಳಗೋಡಿ, ಗ್ರಾಮದ ಹಿರಿಯರಾದ ಬಾಳಪ್ಪ ನಾಗಣ್ಣವರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ದುಂಡಪ್ಪ ಹೂಲಿ

