ದಕ್ಷಿಣ ಕನ್ನಡ : ಜಿಲ್ಲೆಯ ಸುಳ್ಯ ತಾಲೂಕಿನ ಪ್ರಸಿದ್ಧ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರಕ್ಕೆ ಬಾಲಿವುಡ್ ನ ಖ್ಯಾತ ನಟಿ ಕತ್ರಿನಾ ಕೈಫ್ ಅವರು ಇಂದು ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ವಿವಾಹ ಆಗದವರು, ಮಕ್ಕಳಾಗದವರು ಹೀಗೆ ಅನೇಕ ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಕುಕ್ಕೆಗೆ ಸಾಮಾನ್ಯವಾಗಿ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಮಾಡುತ್ತಾರೆಂಬ ನಂಬಿಕೆ.ಅನೇಕರು ಸರ್ಪ ಸಂಸ್ಕಾರ ಪೂಜೆಯೂ ಮಾಡಿಸುವ ಮೂಲಕ ದೋಷ ನಿವಾರಣೆಗೆ ಪ್ರಾರ್ಥಿಸುವುದು ವಾಡಿಕೆ.
ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರನ್ನು ಕತ್ರಿನಾ ಕೈಫ್ ಪ್ರೀತಿಸಿ ವಿವಾಹವಾಗಿದ್ದು ಗೊತ್ತೇ ಇದೆ. ಮದುವೆಯ ಬಳಿಕ ಸಿನಿಮಾಗಳಿಂದ ಹೆಚ್ಚಾಗಿ ಅಂತರ ಕಾಯ್ದುಕೊಂಡಿರುವ ಕತ್ರಿನಾ, ಹಲವು ಹಿಂದೂ ದೇಗುಲ, ಧಾರ್ಮಿಕ ಸ್ಥಳಗಳಿಗೆ ನಟಿ ಭೇಟಿ ಕೊಡುತ್ತಿದ್ದಾರೆ. ಇತ್ತೀಚೆಗೆ ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳಕ್ಕೂ ಕುಟುಂಬ ಸಮೇತ ಭೇಟಿ ನೀಡಿ ಪುಣ್ಯ ಸ್ನಾನ ಮಾಡಿದ್ದರು.
ಇದೀಗ ಕುಕ್ಕೆಗೆ ಭೇಟಿ ನೀಡಿದ್ದು, ಸರ್ಪ ಸಂಸ್ಕಾರ ಪೂಜೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸರ್ಪಸಂಸ್ಕಾರ ಯಾಗಶಾಲೆಯಲ್ಲಿ ಇಂದು ಮತ್ತು ನಾಳೆ ಸುಬ್ರಹ್ಮಣ್ಯ ಸ್ವಾಮಿಗೆ ಸೇವೆ ನೆರವೇರಿಸಲಿದ್ದು, ಸಂತಾನಕ್ಕಾಗಿ ಕತ್ರಿನಾ ಸುಬ್ರಹ್ಮಣ್ಯ ಸ್ವಾಮಿಯ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.