ವಿಜಯಪುರ : ವಿಜಯಪುರದಲ್ಲಿ ಗೌರಘಟನೆ ಒಂದು ಸಂಭವಿಸಿದ್ದು ತಾನೇ ಹೆತ್ತ ಮಗನನ್ನು ನದಿಗೆ ತಳಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ನಾಗಠಾಣದಲ್ಲಿ ನಡೆದಿದೆ. ಇದಕ್ಕೆ ಕಾರಣ ಮಗ ತನ್ನ ಹೋಲಿಕೆ ಇಲ್ಲ ಎಂದು ತಿಳಿದು ನದಿಗೆ ತಳ್ಳಿ ಮಗನನ್ನು , ತಂದೆಯೇ ಕೊಲೆ ಮಾಡಿದ್ದಾನೆ.
ನಾಗಠಾಣದ ಸಿದ್ಧಾರ್ಥ ಮಲ್ಲಿಕಾರ್ಜುನ್ ಅರಕೇರಿ (6) ಕೊಲೆಯಾದ ಬಾಲಕನಾಗಿದ್ದು ಮಲ್ಲಿಕಾರ್ಜುನ ಅರಕೇರಿಗೆ ಗ್ರಾಮದ ಕೆಲ ಜನರು ನಿನ್ನ ಮಗ ಸಿದ್ದಾರ್ಥ ನೋಡಲು ನಿನಂತೆ ಇಲ್ಲ ಎಂದು ಚೇಡಿಸಿದ್ದರು.
ನಿನ್ನ ಮಗನ ಹೋಲಿಕೆ ನಿನ್ನಂತಿಲ್ಲ ಎಂದು ನಿತ್ಯ ಸತಾಯಿಸುತ್ತಿದ್ದರು, ಇದರಿಂದ ರೋಸಿಹೋಗಿದ್ದ ಮಲ್ಲಿಕಾರ್ಜುನ ಅರಕೇರಿ ಹೆತ್ತ ಮಗನನ್ನು ನದಿಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ. ಮಹಾರಾಷ್ಟ್ರದ ಕರಾಡ್ ಜಿಲ್ಲೆ ವಡೋಲಿ ಬಳಿ ಕೃಷ್ಣಾ ನದಿ ಬಳಿ ಕರೆದುಕೊಂಡು ಹೋಗಿ ಮಗುವನ್ನ ನದಿಗೆ ತಳ್ಳಿದ್ದಾನೆ.
ಕಳೆದ ಮಾರ್ಚ್ 16 ರಂದು ಮಗನನ್ನು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿ ವಾಪಸ್ ಊರಿಗೆ ಬಂದಿದ್ದ ಆರೋಪಿ ಮಲ್ಲಿಕಾರ್ಜುನ ಅರಕೇರಿ, ಮನೆಯವರ ಬಳಿ ಮಗನನ್ನು ಸಿಂದಗಿ ಬಳಿ ಶಾಲೆಗೆ ಸೇರಿಸಿ ಹಾಸ್ಟೆಲ್ನಲ್ಲಿ ಇಟ್ಟಿದ್ದಾಗಿ ತಿಳಿಸಿದ್ದನು.
ಇನ್ನು, ಕಳೆದ ಏಪ್ರಿಲ್ 1 ರಂದು ಮಗನ ಹುಟ್ಟುಹಬ್ಬದ ದಿನ ಕರೆದುಕೊಂಡು ಬರುವಂತೆ ತಾಯಿ ಭಾಗ್ಯಶ್ರಿ ಪಟ್ಟು ಹಿಡಿದಿದ್ದರು. ಮಗ ಎಲ್ಲಿದ್ದಾನೆ ಎಂದು ಕೇಳಿದಾಗ ಆರೋಪಿ ಮಲ್ಲಿಕಾರ್ಜುನ ಮನೆಯಿಂದ ಓಡಿ ಹೋಗಿದ್ದನು.
ಇದರಿಂದ ಅನುಮಾನ ಬಂದು ಮೃತ ಮಗುವಿನ ತಾಯಿ ಭಾಗ್ಯಶ್ರೀ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಮಲ್ಲಿಕಾರ್ಜುನ ಮಗನನ್ನು ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಸದ್ಯ ಪೊಲೀಸರು ಮಲ್ಲಿಕಾರ್ಜುನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.




