78ನೇ ವಾರ್ಷಿಕ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್‌ನ ಕೇನ್ಸ್‌ನಲ್ಲಿ ಭವ್ಯವಾಗಿ ಆಯೋಜನೆಗೊಂಡಿದೆ. 2025ರ ಈ ಪ್ರತಿಷ್ಠಿತ ಚಲನಚಿತ್ರೋತ್ಸವವು ಮೇ 13ರಿಂದ ಮೇ 24ರವರೆಗೆ ನಡೆಯುತ್ತಿದ್ದು, ವಿಶ್ವದಾದ್ಯಂತದ ಚಿತ್ರರಸಿಕರ ಗಮನವನ್ನು ಸೆಳೆಯುತ್ತಿದೆ.
ಈ ಬಾರಿಯ ಕೇನ್ಸ್ ಫೆಸ್ಟಿವಲ್‌ನಲ್ಲಿ ಜಾಗತಿಕ ಚಿತ್ರರಂಗದ ಖ್ಯಾತ ನಟ-ನಟಿಯರು, ನಿರ್ದೇಶಕರು ಮತ್ತು ಕಲಾವಿದರು ರೆಡ್ ಕಾರ್ಪೆಟ್‌ನಲ್ಲಿ ತಮ್ಮ ಸೊಗಸಾದ ಕಲಾತ್ಮಕ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.
ಈ ಗ್ಲಾಮರ್‌ನ ಜೊತೆಗೆ, ಭಾರತೀಯ ಸಂಸ್ಕೃತಿಯ ಪ್ರತಿನಿಧಿಯಾಗಿ ಭಾರತದ ನಟಿ ರುಚಿ ಗುಜ್ಜರ್ ತಮ್ಮ ವಿಶಿಷ್ಟ ಕೊಡುಗೆಯ ಮೂಲಕ ಸುದ್ದಿಯಾಗಿದ್ದಾರೆ.
ರುಚಿ ಗುಜ್ಜರ್ ಈ ಬಾರಿಯ ಕೇನ್ಸ್ ರೆಡ್ ಕಾರ್ಪೆಟ್‌ನಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಅವರು ಧರಿಸಿದ್ದ ರಾಜಸ್ಥಾನದ ಸಾಂಪ್ರದಾಯಿಕ ಲೆಹಂಗಾದ ಜೊತೆಗೆ, ಅವರ ಗಮನಾರ್ಹ ಕೊಡುಗೆಯೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಒಳಗೊಂಡ ನೆಕ್ಲೇಸ್.
ಈ ವಿಶಿಷ್ಟ ಆಭರಣವು ಕೇವಲ ಫ್ಯಾಷನ್‌ಗಾಗಿ ಧರಿಸಿದ್ದಲ್ಲ, ಬದಲಿಗೆ ಭಾರತದ ಪ್ರಧಾನಮಂತ್ರಿಗೆ ಗೌರವ ಸಲ್ಲಿಸುವ ಸಂಕೇತವಾಗಿದೆ ಎಂದು ರುಚಿ ಗುಜ್ಜರ್ ಸ್ಪಷ್ಟಪಡಿಸಿದ್ದಾರೆ.
ಕೇನ್ಸ್‌ನ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡ ರುಚಿ ಗುಜ್ಜರ್, ತಮ್ಮ ಈ ಕೃತಿಯ ಬಗ್ಗೆ ಮಾತನಾಡುತ್ತಾ, ‘ಈ ನೆಕ್ಲೇಸ್ ಕೇವಲ ಗ್ಲಾಮರ್‌ಗಾಗಿ ಧರಿಸಿಲ್ಲ. ಇದು ನನ್ನ ಹೃದಯದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮರ್ಪಿತವಾದ ಗೌರವ.
ಅವರ ನಾಯಕತ್ವವು ಭಾರತದ ಸಾಂಸ್ಕೃತಿಕ ಹೆಮ್ಮೆಯನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುತ್ತದೆ. ಅವರ ಕೊಡುಗೆಗಳು ದೇಶವನ್ನು ಮುನ್ನಡೆಸಿರುವ ರೀತಿಯನ್ನು ಗೌರವಿಸಲು ಈ ಸಂದರ್ಭವನ್ನು ಬಳಸಿಕೊಂಡಿದ್ದೇನೆ,’ ಎಂದು ತಿಳಿಸಿದ್ದಾರೆ.
ರಾಜಸ್ಥಾನದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಲೆಹಂಗಾದ ಒಡವೆಯು ಕೇನ್ಸ್‌ನ ರೆಡ್ ಕಾರ್ಪೆಟ್‌ನಲ್ಲಿ ಎಲ್ಲರ ಗಮನವನ್ನು ಸೆಳೆಯಿತು. ಈ ಒಡವೆಯ ಜೊತೆಗೆ, ಪ್ರಧಾನಿ ಮೋದಿ ಅವರ ಫೋಟೋವಿರುವ ನೆಕ್ಲೇಸ್ ಧರಿಸುವ ಮೂಲಕ ರುಚಿ ಗುಜ್ಜರ್ ಭಾರತದ ಸಾಂಸ್ಕೃತಿಕ ಗೌರವವನ್ನು ಎತ್ತಿಹಿಡಿದಿದ್ದಾರೆ.
ರುಚಿ ಗುಜ್ಜರ್ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರತೀಯ ಚಿತ್ರರಂಗದ ಅಭಿಮಾನಿಗಳು ಮತ್ತು ರಾಜಕೀಯ ಚಿಂತಕರಿಂದ ಈ ಕೃತಿಯನ್ನು ಶ್ಲಾಘಿಸಲಾಗುತ್ತಿದೆ.