ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ದೇಶಾದ್ಯಂತ 1,364 ಕ್ಯಾನ್ಸರ್ ವಿರೋಧಿ ಔಷಧಿಗಳ ಗರಿಷ್ಠ ಮಾರಾಟ ಬೆಲೆಯನ್ನು (MRP) ಗಣನೀಯವಾಗಿ ಇಳಿಕೆ ಮಾಡಿದೆ.
ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿದ್ದು, ಕ್ಯಾನ್ಸರ್ ಚಿಕಿತ್ಸೆಯ ವೆಚ್ಚ ಇನ್ನುಮುಂದೆ ರೋಗಿಗಳಿಗೆ ಹೆಚ್ಚು ಕೈಗೆಟುಕುವಂತಾಗಲಿದೆ.
ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧೀಯ ಇಲಾಖೆಯ ವ್ಯಾಪ್ತಿಗೆ ಒಳಪಡುವ 'ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ' (NPPA), ಅಗತ್ಯ ಚಿಕಿತ್ಸೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗಿಸುವ ಉದ್ದೇಶದಿಂದ 137 ಕ್ಯಾನ್ಸರ್ ಔಷಧಿಗಳ ಮೇಲಿನ ವ್ಯಾಪಾರ ಲಾಭಾಂಶಕ್ಕೆ (Trade Margin) ಮಿತಿ ವಿಧಿಸಿತ್ತು. ಈ ನಿರ್ಧಾರದ ಬೆನ್ನಲ್ಲೇ ಔಷಧಿಗಳ ಬೆಲೆಯಲ್ಲಿ ಈ ಮಹತ್ವದ ಕುಸಿತ ದಾಖಲಾಗಿದೆ.
ಒಟ್ಟು 85 ಪ್ರಮುಖ ಔಷಧ ತಯಾರಿಕಾ ಕಂಪನಿಗಳು 121 ಮೂಲ ಔಷಧಿಗಳಿಗೆ ಸಂಬಂಧಿಸಿದಂತೆ 1,364 ಮಾದರಿಗಳ ಪರಿಷ್ಕೃತ ದರಪಟ್ಟಿಯನ್ನು ವರದಿ ಮಾಡಿವೆ.
ಇವುಗಳಲ್ಲಿ ಬರೋಬ್ಬರಿ 679 ಬ್ರಾಂಡ್‌ಗಳು ತಮ್ಮ ಔಷಧಿಗಳ ಬೆಲೆಯನ್ನು ಶೇ. 50 ಕ್ಕಿಂತ ಹೆಚ್ಚು ಇಳಿಕೆ ಮಾಡಿದ್ದು, ಗರಿಷ್ಠ ಬೆಲೆ ಕಡಿತವು ದಾಖಲೆಯ ಶೇ. 96.45 ರಷ್ಟಿದೆ.


