ಅಮೆರಿಕದ (America) ಮ್ಯಾನ್‌ಹ್ಯಾಟನ್ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಯು ಅಂತರಾಷ್ಟ್ರೀಯ ತನಿಖೆಗಳ ಮೂಲಕ ವಶಪಡಿಸಿಕೊಂಡಿದ್ದ 14 ಮಿಲಿಯನ್ ಡಾಲರ್ (ಸುಮಾರು 117 ಕೋಟಿ ರೂಪಾಯಿ) ಮೌಲ್ಯದ 657 ಪುರಾತನ ಕಲಾಕೃತಿಗಳನ್ನು (Antiquities) ಭಾರತಕ್ಕೆ (India) ಹಸ್ತಾಂತರಿಸಿದೆ.
ನ್ಯೂಯಾರ್ಕ್‌ನಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಡಿಸ್ಟ್ರಿಕ್ಟ್ ಅಟಾರ್ನಿ ಆಲ್ವಿನ್ ಎಲ್ ಬ್ರಾಗ್ ಜೂನಿಯರ್ ಅವರು ಈ ಅಮೂಲ್ಯ ವಸ್ತುಗಳನ್ನು ಭಾರತಕ್ಕೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ಹಸ್ತಾಂತರ ಮಾಡಲಾದ ಕಲಾಕೃತಿಗಳಲ್ಲಿ ಪ್ರಮುಖವಾಗಿ 2 ಮಿಲಿಯನ್ ಡಾಲರ್ ಮೌಲ್ಯದ ಬೋಧಿಸತ್ವ ಅವಲೋಕಿತೇಶ್ವರನ ಕಂಚಿನ ವಿಗ್ರಹವಿದೆ. ಈ ವಿಗ್ರಹವು ಮೂಲತಃ ರಾಯ್‌ಪುರದ ಮಹಂತ್ ಘಾಸಿದಾಸ್ ಸ್ಮಾರಕ ವಸ್ತುಸಂಗ್ರಹಾಲಯಕ್ಕೆ ಸೇರಿದ್ದಾಗಿದ್ದು, 1982 ರಲ್ಲಿ ಕಳ್ಳತನವಾಗಿ ಅಮೆರಿಕಕ್ಕೆ ಸಾಗಿಸಲ್ಪಟ್ಟಿತ್ತು. ಅಲ್ಲದೆ, 7.5 ಮಿಲಿಯನ್ ಡಾಲರ್ ಮೌಲ್ಯದ ಕೆಂಪು ಮರಳುಗಲ್ಲಿನ ಬುದ್ಧನ ಪ್ರತಿಮೆಯೂ ಇದರಲ್ಲಿ ಸೇರಿದೆ. ಇದರ ಜೊತೆಗೆ ಮಧ್ಯಪ್ರದೇಶದ ದೇವಸ್ಥಾನವೊಂದರಿಂದ 2000ನೇ ಇಸವಿಯಲ್ಲಿ ಲೂಟಿ ಮಾಡಲಾಗಿದ್ದ ನೃತ್ಯ ಗಣೇಶನ ವಿಗ್ರಹವೂ ಈಗ ಭಾರತಕ್ಕೆ ಮರಳಿದೆ.
ಕುಖ್ಯಾತ ಕಳ್ಳಸಾಗಣೆದಾರ ಸುಭಾಷ್ ಕಪೂರ್ ಮತ್ತು ನ್ಯಾನ್ಸಿ ವೀನರ್ ಅವರ ಜಾಲದ ಮೇಲೆ ನಡೆಸಿದ ನಿರಂತರ ತನಿಖೆಯಿಂದಾಗಿ ಈ ಕಲಾಕೃತಿಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಈ ಬಗ್ಗೆ ಮಾತನಾಡಿದ ಅಟಾರ್ನಿ ಬ್ರಾಗ್, "ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಗುರಿಯಾಗಿಸಿಕೊಂಡು ನಡೆದ ಕಳ್ಳಸಾಗಣೆ ಜಾಲವು ದೈತ್ಯಾಕಾರವಾದುದು.
ಕಳುವಾದ ಎಲ್ಲಾ ಕಲಾಕೃತಿಗಳನ್ನು ಮರಳಿ ತಾಯ್ನಾಡಿಗೆ ತಲುಪಿಸಲು ನಾವು ಇನ್ನಷ್ಟು ಶ್ರಮಿಸುತ್ತೇವೆ," ಎಂದಿದ್ದಾರೆ. ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಬಿನಯ ಪ್ರಧಾನ್ ಅವರು ಈ ಕಾರ್ಯಾಚರಣೆಯಲ್ಲಿ ಸಹಕರಿಸಿದ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಮತ್ತು ಇತರ ಏಜೆನ್ಸಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ಕಲಾಕೃತಿಗಳನ್ನು ಲೂಟಿ ಮಾಡಿದ ಆರೋಪ ಎದುರಿಸುತ್ತಿರುವ ಸುಭಾಷ್ ಕಪೂರ್ ವಿರುದ್ಧ ಕಳೆದ ಒಂದು ದಶಕದಿಂದ ತನಿಖೆ ನಡೆಯುತ್ತಿದೆ. 2012 ರಲ್ಲಿ ಆತನ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. 2022 ರಲ್ಲಿ ಭಾರತದಲ್ಲಿ ಶಿಕ್ಷೆಗೆ ಗುರಿಯಾಗಿರುವ ಕಪೂರ್ ಸದ್ಯ ಅಮೆರಿಕಕ್ಕೆ ಹಸ್ತಾಂತರವಾಗುವ ಪ್ರಕ್ರಿಯೆಯಲ್ಲಿದ್ದಾನೆ.
ಮ್ಯಾನ್‌ಹ್ಯಾಟನ್‌ನ ಆಂಟಿಕ್ವಿಟೀಸ್ ಟ್ರಾಫಿಕಿಂಗ್ ಯುನಿಟ್ (ATU) ಇದುವರೆಗೆ 485 ಮಿಲಿಯನ್ ಡಾಲರ್ ಮೌಲ್ಯದ 6,200ಕ್ಕೂ ಹೆಚ್ಚು ಸಾಂಸ್ಕೃತಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ವಿಶ್ವದ 36 ವಿವಿಧ ದೇಶಗಳಿಗೆ ಮರಳಿಸಿದೆ. ಭಾರತದ ಕಳುವಾದ ಸಾಂಸ್ಕೃತಿಕ ಸಂಪತ್ತನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಇದೊಂದು ಮಹತ್ವದ ಯಶಸ್ಸಾಗಿದೆ.

