ಅಹಮದಾಬಾದ್: ಹಿಂದೂ ವಿವಾಹ ಕಾಯ್ದೆಯಡಿ ಅಗತ್ಯವಿರುವ ಧಾರ್ಮಿಕ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ಪೂರೈಸದೆ, ಕೇವಲ ಮದುವೆ ನೋಂದಣಿ (Marriage Registration) ಮಾಡಿಸಿದ್ದರೆ ಅಂತಹ ಮದುವೆಯನ್ನು ಕಾನೂನುಬದ್ಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಾಕ್ಷ್ಯಗಳು ಮತ್ತು ಧಾರ್ಮಿಕ ಚೌಕಟ್ಟನ್ನು ಪರಿಶೀಲಿಸಿದ ನ್ಯಾಯಾಲಯವು, ಯಾವುದೇ ಪವಿತ್ರ ವಿಧಿವಿಧಾನಗಳು ನಡೆಯದೆ ನೋಂದಾಯಿಸಲ್ಪಟ್ಟಿದ್ದ ವಿವಾಹವನ್ನು ಸಂಪೂರ್ಣವಾಗಿ ರದ್ದುಗೊಳಿಸಿ 'ಶೂನ್ಯ' (Null and Void) ಎಂದು ಘೋಷಿಸಿದೆ.
ಪ್ರಕರಣದ ಹಿನ್ನೆಲೆ
ಯುವಕನೊಬ್ಬ ತಾನು ಯುವತಿಯ ತಂದೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ತನ್ನ ಅರಿವಿಗೆ ಬಾರದಂತೆ ಮತ್ತು ಒಪ್ಪಿಗೆಯಿಲ್ಲದೆ ಕೆಲವು ಮದುವೆ ದಾಖಲೆಗಳಿಗೆ ಸಹಿ ಪಡೆದುಕೊಳ್ಳಲಾಗಿತ್ತು ಎಂದು ಕೋರ್ಟ್ ಮೆಟ್ಟಿಲೇರಿದ್ದ. ತಾನು ಪ್ರಸ್ತುತ ಯುನೈಟೆಡ್ ಕಿಂಗ್ಡಮ್ನಲ್ಲಿ (UK) ವಾಸಿಸುತ್ತಿದ್ದು, ಯಾವುದೇ ವಿವಾಹ ಸಮಾರಂಭದಲ್ಲಿ ಭಾಗವಹಿಸಿಲ್ಲ ಮತ್ತು ಯುವತಿಯೊಂದಿಗೆ ಪತಿ-ಪತ್ನಿಯಾಗಿ ಬಾಳಿಲ್ಲ ಎಂದು ಹೇಳಿದ್ದ. ಆರಂಭದಲ್ಲಿ ಕುಟುಂಬ ನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಯುವಕ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದ.


