ಕೋಲಾರ: ಸಾಲದ ಬಾಧೆ ಹಾಗೂ ಸಾಲಗಾರರ ಕಿರುಕುಳಕ್ಕೆ ಬೇಸತ್ತು ತಾಯಿಯೊಬ್ಬರು ತನ್ನಿಬ್ಬರು ಬೆಳೆದ ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಹೃದಯವಿದ್ರಾವಕ ಘಟನೆ ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಬಳಿ ನಡೆದಿದೆ.
ಬೆಗ್ಲಿಬೆಣಜೇನಹಳ್ಳಿ ಗ್ರಾಮದ ನಿವಾಸಿ ಪ್ರಮೀಳಾ (40), ಅವರ ಮಗಳು ಸ್ವಪ್ನ (22) ಹಾಗೂ ಮಗ ಚರಣ್ (18) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.
ಇತ್ತೀಚೆಗೆ ಮನೆ ನಿರ್ಮಾಣಕ್ಕಾಗಿ ಮಾಡಿಕೊಂಡಿದ್ದ ಭಾರಿ ಮೊತ್ತದ ಸಾಲವೇ ಈ ದುರಂತಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ.
ಮೃತ ಕುಟುಂಬದ ಹಿನ್ನೆಲೆ ನೋಡುವುದಾದರೆ, ಪತಿ ಸುರೇಶ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಪತ್ನಿ ಪ್ರಮೀಳಾ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಬಡತನದಲ್ಲೂ ಸುರೇಶ್ ದಂಪತಿ ತಮ್ಮ ಇಬ್ಬರೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದರು. ಆದರೆ, ಇತ್ತೀಚೆಗೆ ಸ್ವಂತ ಮನೆ ಕಟ್ಟಿಕೊಳ್ಳುವ ಆಸೆಯಿಂದ ವಿವಿಧ ಖಾಸಗಿ ಫೈನಾನ್ಸ್, ಸಂಘ-ಸಂಸ್ಥೆಗಳು ಹಾಗೂ ವ್ಯಕ್ತಿಗಳಿಂದ ಸುಮಾರು 15 ಲಕ್ಷ ರೂಪಾಯಿ ಕೈಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ, ಇತ್ತ ಖಾಸಗಿ ಫೈನಾನ್ಸ್‌ನವರ ಕಿರುಕುಳ ತಾಳಲಾರದೆ ಕುಟುಂಬ ತೀವ್ರ ಕಂಗಾಲಾಗಿತ್ತು.


