ಪಾವಗಡ : ಶನಿವಾರ ಸಂಜೆ ಸ್ನೇಹಿತರ ಜೊತೆ ಹೋದ ಮಗ, ಭಾನುವಾರ ಬೆಳಿಗ್ಗೆ ತೋಟದ ಗುಡಿಸಲಿನಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ! ಹಸುವಿಗೆ ಹುಲ್ಲು ಹಾಕಲು ಹೋದ ಪೋಷಕರು ಮಗನ ಶವ ನೋಡಿ ಆಕ್ರಂದನ ಮುಗಿಲು ಮುಟ್ಟಿದ್ದಾರೆ.
ಈ ಘಟನೆ ನಡೆದಿರುವುದು ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಭೂಪೂರು ಗ್ರಾಮದಲ್ಲಿ.
ಪರಿಶಿಷ್ಟ ಪಂಗಡದ (ನಾಯಕ ಸಮುದಾಯ) ನರಸಿಂಹಮೂರ್ತಿ (26) ಮೃತಪಟ್ಟ ದುರ್ದೈವಿ. ಬೆಂಗಳೂರು ಸೇರಿದಂತೆ ವಿವಿಧೆಡೆ ದಾಳಿಂಬೆ ಗಿಡ ಕತ್ತರಿಸುವ ಕೆಲಸ ಮಾಡುತ್ತಿದ್ದ ಈ ಯುವಕನ ಸಾವು ಈಗ ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.

ಏನಿದು ಘಟನೆ ?
ಮಗನಿಗಾಗಿ ಕಾದಿದ್ದ ಪೋಷಕರು!
ಶನಿವಾರ ಸಂಜೆ ನರಸಿಂಹಮೂರ್ತಿ ತನ್ನ ಸ್ನೇಹಿತರ ಜೊತೆ ಮನೆಯಿಂದ ಹೊರಗೆ ಹೋಗಿದ್ದ. ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ, "ಸ್ನೇಹಿತರ ಜೊತೆಯೇ ಇರಬಹುದು" ಎಂದು ಪೋಷಕರು ಸುಮ್ಮನಾಗಿದ್ದರು. ಆದರೆ ಭಾನುವಾರ ಬೆಳಿಗ್ಗೆ ತೋಟಕ್ಕೆ ಹಸು ಮೇಯಿಸಲು ಹೋದಾಗ ಅಲ್ಲಿ ನರಸಿಂಹಮೂರ್ತಿಯ ದ್ವಿಚಕ್ರ ವಾಹನ ನಿಂತಿತ್ತು. ಕುತೂಹಲದಿಂದ ಪೋಷಕರು ಗುಡಿಸಲಿನ ಒಳಗೆ ಇಣುಕಿ ನೋಡಿದಾಗ ಇಡೀ ಕುಟುಂಬವೇ ನಡುಗಿಹೋಗಿದೆ.. ಮಗ ಗುಡಿಸಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ತೂಗಾಡುತ್ತಿದ್ದ.
ಪ್ರೇಮಪ್ರಸಂಗ, ಸ್ನೇಹಿತರ ಜಗಳ ಮತ್ತು 'ಆ' ಒಂದು ಭಯಾನಕ ಬೆದರಿಕೆ! ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡರೂ, ಕುಟುಂಬಸ್ಥರು ಮಾತ್ರ ಇದು 'ಪಕ್ಕಾ ಕೊಲೆ' ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಗ್ರಾಮಕ್ಕೆ ಬಂದಿದ್ದ ಸ್ನೇಹಿತನ ಸಂಬಂಧಿ ಹುಡುಗಿಯೊಬ್ಬಳ ಜೊತೆ ನರಸಿಂಹಮೂರ್ತಿಗೆ ಪ್ರೀತಿಯಾಗಿತ್ತು ಎನ್ನಲಾಗಿದೆ. ...ಒಂದು ವಾರದೊಳಗೆ ನಿನ್ನ ಮಗನನ್ನು ಮುಗಿಸುತ್ತೇವೆ!" ಇತ್ತೀಚೆಗಷ್ಟೇ ಈ ಪ್ರೇಮ ವಿಚಾರವಾಗಿ ಸ್ನೇಹಿತರ ನಡುವೆ ದೊಡ್ಡ ಜಗಳ ನಡೆದಿತ್ತು. ಈ ವೇಳೆ ನರಸಿಂಹಮೂರ್ತಿಯ ತಂದೆ ರಾಮಕೃಷ್ಣ ಅವರಿಗೆ, "ನಿನ್ನ ಮಗನನ್ನು ವಾರದೊಳಗೆ ಮುಗಿಸಿಬಿಡುತ್ತೇವೆ" ಎಂದು ಕೆಲವರು ನೇರವಾಗಿಯೇ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಈ ಬೆದರಿಕೆ ಬೆನ್ನಲ್ಲೇ ಈಗ ಯುವಕ ಶವವಾಗಿ ಪತ್ತೆಯಾಗಿರುವುದು ಕೊಲೆ ಶಂಕೆಗೆ ಬಲ ನೀಡಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತಿರುಮಣಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಪೋಷಕರ ದೂರಿನ ಮೇರೆಗೆ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ಪ್ರೀತಿ ಮತ್ತು ಸ್ನೇಹಿತರ ನಡುವಿನ ಹಗೆತನವೇ ಈ ಸಾವಿಗೆ ಕಾರಣವೇ ಎಂಬ ಸತ್ಯ ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.
ವರದಿ: ಶಿವಾನಂದ,


