ಪಾವಗಡ : ಪಟ್ಟಣದ ಕರ್ನಾಟಕ ರಾಜ್ಯ ಪೊಲೀಸ್, ತುಮಕೂರು ಜಿಲ್ಲಾ ಪೊಲೀಸ್, ಪಾವಗಡ ಪೋಲೀಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಲು ಬೃಹತ್ ಅರಿವು ಕಾರ್ಯಕ್ರಮವನ್ನು ಎಸ್.ಎಸ್.ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ವೃತ್ತ ನಿರೀಕ್ಷಕರಾದ ಸುರೇಶ್ ರವರು ಮಾತನಾಡಿ ಮಾದಕ ವಸ್ತುಗಳು ಔಷಧಿ ರೂಪ ಮತ್ತು ಮತ್ತೇರಿಸುವ ದುಶ್ಚಟ ಎಂಬ ಎರಡು ರೂಪಗಳಲ್ಲಿ ಲಭ್ಯವಿವೆ.
ಒಂದು ಬಾರಿ ಚಟಕ್ಕೆ ಒಳಗಾದರೆ ಹೊರಬರುವುದು ಕಷ್ಟ. ನಿಮ್ಮ ಜೀವನ ಕುಟುಂಬ ಹಾಗೂ ದೇಶದ ಭವಿಷ್ಯ ಹಾಳಾಗುತ್ತದೆ,ಆಂಧ್ರ, ಒರಿಸ್ಸಾ ದಿಂದ ಗಾಂಜಾ ಕಳ್ಳಸಾಗಣೆ ಮತ್ತು ಸ್ಥಳೀಯವಾಗಿ ಬೆಳೆಯುವ ಪ್ರಯತ್ನಗಳು ನಡೆಯುತ್ತಿವೆ.
ಇಂತಹ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಜೊತೆಗೆ 18 ವರ್ಷದೊಳಗಿನವರು ವಾಹನ ಚಲಾಯಿಸಿದರೆ ಪೋಷಕರಿಗೆ ₹25,000 ದಂಡ ವಿಧಿಸಲಾಗುತ್ತದೆ ಎಂಬ ಕಾನೂನಿನ ಕುರಿತು ಮಾಹಿತಿ ನೀಡಿದರು.
ಗ್ರಾಮೀಣ ವೃತ್ತ ನಿರೀಕ್ಷಕರಾದ ಕೊಟ್ರೇಶ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾದಕ ವಸ್ತು ಬಳಸಿದರೆ ಕನಿಷ್ಠ 1 ವರ್ಷದಿಂದ ಗರಿಷ್ಠ 20 ವರ್ಷ ಜೈಲು ಶಿಕ್ಷೆ ಹಾಗೂ ₹1 ಲಕ್ಷದಿಂದ ₹40 ಲಕ್ಷದವರೆಗೆ ದಂಡ ವಿಧಿಸಬಹುದು,112 ಮತ್ತು ಮಾನಸ ಸಹಾಯವಾಣಿ 1933 ಗೆ ಧೈರ್ಯವಾಗಿ ಮಾಹಿತಿ ನೀಡಬಹುದು.
ಮಾಹಿತಿದಾರರ ಗುರುತು ಸಂಪೂರ್ಣ ಗೌಪ್ಯವಾಗಿರುತ್ತದೆ ಎಂದು ಭರವಸೆ ನೀಡಿದರು.ಎಸ್.ಎಸ್.ಕೆ ಕಾಲೇಜಿನ ಪ್ರಾಂಶುಪಾಲ ಮನೋಜ್ ಕುಮಾರ್ ಮಾತನಾಡಿ ಕೂಡ ವಿದ್ಯಾರ್ಥಿಗಳಿಗೆ ದುಶ್ಚಟದಿಂದ ದೂರವಿರಲು ಕರೆ ನೀಡಿದರು.ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಬೋಧಿಸಲಾಯಿತು.
ನಂತರ ಎಸ್.ಎಸ್.ಕೆ ಬಯಲು ರಂಗಮಂದಿರದಿಂದ ಶ್ರೀ ಶನಿಮಾತ್ಮ ದೇವಸ್ಥಾನದ ಮುಂಭಾಗವಾಗಿ ಅಂಬೇಡ್ಕರ್ ವೃತ್ತದವರೆಗೆ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಂಬಾಬುಪಿ.ಎಸ್.ಐ ಗಳಾದ ಮುತ್ತುರಾಜು, ಮಹಮದ್, ಶಿವಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿಗಳಾದ ದೀಪಕ್,ಗೋಪಿ, ಶ್ರೀನಿವಾಸ್, ವೆಂಕಟೇಶ್ ನಾಯ್ಕ, ಸಂಜೀವ್ ಕುಮಾರ್, ನಟೇಶ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಶಿವಾನಂದ


