ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾಗಲಿದ್ದು, ಹೊಸ ಚಂಡಮಾರುತ ಸೃಷ್ಟಿಯಾಗುವ ಭೀತಿ ಎದುರಾಗಿದೆ.
ಸೋಮವಾರದ ವೇಳೆಗೆ ಬಂಗಾಲ ಕೊಲ್ಲಿಯಲ್ಲಿ ಹೊಸ ಚಂಡಮಾರುತ ಉಂಟಾಗುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಬಂಗಾಲ ಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಹೊಸ ಹವಾಮಾನ ವ್ಯವಸ್ಥೆಯು, ನವೆಂಬರ್ 16, ಸೋಮವಾರದ ವೇಳೆಗೆ ಚಂಡಮಾರುತವಾಗಿ (Cyclonic Storm) ತೀವ್ರಗೊಳ್ಳುವ ಸಾಧ್ಯತೆಯಿದೆ.
ಇದು ಚಂಡಮಾರುತವಾಗಿ ಪರಿವರ್ತನೆಗೊಂಡರೆ, ಇದಕ್ಕೆ ‘ಅಕ್ವಾನ್’ (Akvan) ಎಂದು ಹೆಸರಿಸಲಾಗುತ್ತದೆ. ಈ ಹೆಸರನ್ನು ಇರಾನ್ ಸೂಚಿಸಿದೆ.
ನವೆಂಬರ್ 13, ಶುಕ್ರವಾರ ಬೆಳಿಗ್ಗೆ 5:30 ರ ಸುಮಾರಿಗೆ ಆಗ್ನೇಯ ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ (Low-pressure area) ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಬೆಳಿಗ್ಗೆ 8:30 ರ ವೇಳೆಗೆ ಈ ವ್ಯವಸ್ಥೆಯು ಅದೇ ಪ್ರದೇಶದಲ್ಲಿ ನೆಲೆಗೊಂಡಿತ್ತು.
ಈ ಹವಾಮಾನ ವ್ಯವಸ್ಥೆಯು, ಮಧ್ಯ ಅಂಡಮಾನ್ ಸಮುದ್ರ ಮತ್ತು ಅದರ ಪಕ್ಕದಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲಿರುವ ‘ಮೇಲ್ಮೈ ಚಂಡಮಾರುತ ಪರಿಚಲನೆ’ಯ (Upper-air cyclonic circulation) ಪ್ರಭಾವಕ್ಕೆ ಒಳಗಾಗಿದೆ.
IMD ಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಈ ವಾಯುಭಾರ ಕುಸಿತವು ವಾಯುವ್ಯ ದಿಕ್ಕಿನತ್ತ ಚಲಿಸಿ, ನವೆಂಬರ್ 14 ರ ವೇಳೆಗೆ ಹೆಚ್ಚು ಸ್ಪಷ್ಟವಾದ ವಾಯುಭಾರ ಕುಸಿತವಾಗಿ (Well-marked low-pressure area) ಬದಲಾಗುವ ಸಾಧ್ಯತೆಯಿದೆ.


