ಹಾಸನ: ಮಹಿಳೆಯರು 2,000 ರೂ.ಗೆ ಮರುಳಾಗಬೇಡಿ. ನಾನು ತಿಂಗಳಿಗೆ 5,000 ರೂ. ಬರುವಂತೆ ಮಾಡಬಲ್ಲೆ ಎಂದು 'ಗೃಹಲಕ್ಷ್ಮಿ'ಯರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಮನವಿ ಮಾಡಿದರು.
ಹಾಸನ ತಾಲೂಕಿನ, ಬೊಮ್ಮನಹಳ್ಳಿ ಗ್ರಾಮದಲ್ಲಿ ಶ್ರೀವೀರಾಂಜನೇಯ ದೇವಾಲಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಯಮಾಡಿ ಮಹಿಳೆಯರು ಎರಡು ಸಾವಿರಕ್ಕೆ ಮರಳಾಗಬೇಡಿ.
ನಾನು ತಿಂಗಳಿಗೆ ಐದು ಸಾವಿರ ಬರುವಂತೆ ಮಾಡಬಲ್ಲೆ. ಇವತ್ತು ಕಾಯಿಲೆ, ಮಕ್ಕಳ ಶಿಕ್ಷಣಕ್ಕಾಗಿ ಮನೆ, ಮಠ ಕಳೆದುಕೊಳ್ತಾರೆ. ಎರಡು ಸಾವಿರ ರೂಪಾಯಿ ಧರ್ಮಕ್ಕೆ ಕೊಡಲ್ಲ. ಬಹಳ ದಾರಾಳತನದಿಂದ ಕೊಡ್ತಾ ಇಲ್ಲ. ನೀವು ಕಟ್ಟುವ ಟ್ಯಾಕ್ಸ್‌ನಲ್ಲೇ ನಿಮಗೆ ಎರಡು ಸಾವಿರ ಹಣ ಕೊಡುತ್ತಿದ್ದಾರೆ ಎಂದು ಜನತೆಗೆ ತಿಳಿಸಿದರು.
ಸರ್ಕಾರದವರು ಎರಡೂವರೆ ಸಾವಿರ ರೂಪಾಯಿಯನ್ನು ಬರಗಾಲದ ಪರಿಹಾರದ ಹಣವಾಗಿ ಕೊಡ್ತೀವಿ ಅಂತಾರೆ. ಯಾದಗಿರಿ ಭಾಗದಲ್ಲಿ ಎರಡೂವರೆ ಸಾವಿರಕ್ಕಿಂತ ಕಡಿಮೆ ಹಣವನ್ನು ಭಿಕ್ಷೆ ಕೊಟ್ಟ ರೀತಿ ಕೊಟ್ಟಿದ್ದಾರೆ. ಆ ಹಣ ವಾಪಸ್ ಕೊಡ್ತೀವಿ ಅಂತ ಆ ಭಾಗದ ರೈತರು ಹೇಳ್ತಾರೆ. ನನ್ನ ಹತ್ತಿರ ಶ್ರೀಮಂತರು ಬರಲ್ಲ, ನೋವನ್ನು ಅನುಭವಿಸುವ ಬಡವರೇ ಬರೋದು.
ಇಡೀ ರಾಜ್ಯದ ಪ್ರತಿಯೊಂದು ಕುಟುಂಬಗಳು ಕೈಚಾಚಬಾರದು. ಕೈ ಎತ್ತಿ ಕೊಡುವಂತೆ ಬದುಕಬೇಕು. ನನಗೆ ಐದು ವರ್ಷ ಸರ್ಕಾರ ಕೊಟ್ಟರೆ ಎಲ್ಲಾ ಕೆಲಸವನ್ನು ಮಾಡಬಹುದು. ರಾಜ್ಯದ ಖಜಾನೆಯನ್ನು ನೀವು ತುಂಬಿಸಿದ್ದೀರಿ. ನಾನು ಹಲವಾರು ಸಮಸ್ಯೆಗಳನ್ನು ಎದುರಿಸಿ, ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ ಎಂದರೆ ನಿಮ್ಮೆಲ್ಲರ ಆಶೀರ್ವಾದ ಎಂದರು.


