ಕಲಬುರಗಿ: ಬಿಜೆಪಿ ಪ್ರತಿಭಟನೆ ವೇಳೆ ಅಡ್ಡ ಬಂದ ಕಾರಣಕ್ಕೆ ಮಾಜಿ ಶಾಸಕ ರಾಜ್ ಕುಮಾರ್ ಪಾಟೀಲ್ ತೆಲ್ಕೂರ್ (former mla rajkumar patil telkur) ದ್ವಿಚಕ್ರ ವಾಹನ ಸವಾರನೊಬ್ಬನ ವಿರುದ್ಧ ಕೆಂಡಾಮಂಡಲವಾದ ಘಟನೆ ಕಲಬುರಗಿಯಲ್ಲಿ (kalaburagi) ನಡೆದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ, ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮತ್ತು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ ವಿರುದ್ಧ ಇಲ್ಲಿನ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ರಾಜ್ಯ ಸರ್ಕಾರದ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ ತಾಲ್ಲೂಕುಗಳನ್ನು ಸೇರಿಸದಿರುವುದನ್ನು ಖಂಡಿಸಿ ಬಿಜೆಪಿ ನಾಯಕರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ್ದರು.
ಈ ತಿಭಟನೆ ನಡೆಯುತ್ತಿದ್ದ ವೇಳೆ ಬೈಕ ಚಲಾಯಿಸಿಕೊಂಡು ಪ್ರತಿಭಟನಾಕಾರರ ನಡುವಿನಿಂದ ವಾಹನ ಚಲಾಯಿಸಿಕೊಂಡು ಮುಂದೆ ಸಾಗಲು ಯತ್ನಿಸಿದ್ದಾರೆ. ಈ ವೇಳೆ ಅವರನ್ನು ತಡೆದ ಮಾಜಿ ಶಾಸಕ ತೆಲ್ಕೂರ್, ಸವಾರನ ಹೆಲ್ಮೆಟ್ ತೆಗೆದು ನೆಲಕ್ಕೆ ಬಡಿದು, ಟೈರ್ ನ ಗಾಳಿ ತೆಗೆಯಲು ಯತ್ನಿಸಿದ್ದಾರೆ.
ಯಾವುದೇ ಪೂರ್ವಾನುಮತಿ ಪಡೆಯದೆ ಸಾರ್ವಜನಿಕ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ. ಅಲ್ಲದೆ, ಸಾರ್ವಜನಿಕ ವಾಹನ ಸವಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.


