ಬೆಂಗಳೂರು: ಸಹಪಾಠಿ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲೇ ಮನಬಂದಂತೆ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಗಂಭೀರ ಆರೋಪದ ಮೇಲೆ ಸ್ಯಾಂಡಲ್‌ವುಡ್ ಖ್ಯಾತ ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ಹಾಗೂ ಆತನ ಸ್ನೇಹಿತರ ವಿರುದ್ಧ ನಗರದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಹಲ್ಲೆಗೊಳಗಾದ ಸಂತ್ರಸ್ತ ವಿದ್ಯಾರ್ಥಿ ಮನೀಶ್ ಗೌಡ ನೀಡಿದ ದೂರಿನ ಮೇರೆಗೆ ಸಾಮ್ರಾಟ್ ವಿಜಯ್, ಸಮೃದ್ಧ್ ಸಿಂಹ, ವಿಶ್ವಾಸ್ ಸುಚಿ, ಸ್ಕಂದ ವೆಂಕಟೇಶ್, ಸಮೀದ್ ಸೇರಿದಂತೆ ಇತರರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 115(2), 118(1), 352, 351(2), 3(5) ಮತ್ತು 137(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮ್ರಾಟ್ ವಿಜಯ್ ಮತ್ತು ಮನೀಶ್ ಗೌಡ ನಡುವೆ ಸೋಮವಾರ (ಆಗಸ್ಟ್ 31) ರಸ್ತೆಯಲ್ಲಿ ಕಾರು ಓವರ್‌ಟೇಕ್ ಮಾಡುವ ವಿಚಾರವಾಗಿ ತೀವ್ರ ಮಾತಿನ ಚಕಮಕಿ ನಡೆದಿತ್ತು.
ಮನೀಶ್ ತನ್ನ ಸ್ನೇಹಿತರೊಂದಿಗೆ ಕಾರನ್ನು ಹಿಂದಿಕ್ಕಿ ಛೇಡಿಸಿದ್ದರಿಂದ ಕೆರಳಿದ್ದ ಸಾಮ್ರಾಟ್, ಆತನ ವಿರುದ್ಧ ದ್ವೇಷ ಸಾಧಿಸಲು ಹೊಂಚು ಹಾಕಿದ್ದ ಎನ್ನಲಾಗಿದೆ.


