ಬೆಂಗಳೂರು : ಹೋಟೆಲ್ ಮತ್ತು ಬೇಕರಿಗಳಲ್ಲಿ ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಪದೇ ಪದೇ ಮರುಬಳಕೆ ಮಾಡುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗುತ್ತಿರುವ ಗಂಭೀರ ದುಷ್ಪರಿಣಾಮಗಳನ್ನು ತಡೆಯಲು ಆರೋಗ್ಯ ಇಲಾಖೆ ಇದೀಗ ದಿಟ್ಟ ಹೆಜ್ಜೆ ಇಟ್ಟಿದೆ.
ಇನ್ಮುಂದೆ ಹೋಟೆಲ್ಗಳಲ್ಲಿ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಅಕ್ರಮಕ್ಕೆ ಕಡಿವಾಣ ಹಾಕಲು ಇಲಾಖೆಯು ಶೀಘ್ರದಲ್ಲೇ ವಿಶೇಷ ಮೊಬೈಲ್ ಆಯಪ್ ಒಂದನ್ನು ಬಿಡುಗಡೆ ಮಾಡಲಿದ್ದು, ಮುಂದಿನ ಮೂರು ತಿಂಗಳಲ್ಲಿ ಇದು ಜಾರಿಗೆ ಬರಲಿದೆ. ರಾಜ್ಯದ ಎಲ್ಲಾ ಹೋಟೆಲ್ ಉದ್ಯಮಿಗಳು ಹಾಗೂ ಬೇಕರಿ ಮಾಲೀಕರು ಈ ಆಯಪ್ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದೆ.
ತಾವು ಖರೀದಿಸಿದ ಅಡುಗೆ ಎಣ್ಣೆಯ ಪ್ರಮಾಣ, ಬಳಕೆಯಾದ ಪ್ರಮಾಣ ಹಾಗೂ ಬಳಸಿದ ನಂತರ ಬಯೋಗ್ಯಾಸ್ ಏಜೆನ್ಸಿಗಳಿಗೆ ವಿತರಿಸಿದ ಎಣ್ಣೆಯ ನಿಖರ ಲೆಕ್ಕವನ್ನು ಈ ಆಯಪ್ನಲ್ಲಿ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಮೊದಲ ಹಂತದಲ್ಲಿ ವಾಣಿಜ್ಯ ಮಳಿಗೆಗಳಿಗೆ ಈ ನಿಯಮ ಅನ್ವಯವಾಗಲಿದ್ದು, ಎರಡನೇ ಹಂತದಲ್ಲಿ ಮನೆಗಳಲ್ಲೂ ಅಡುಗೆ ಎಣ್ಣೆ ಮರುಬಳಕೆಯನ್ನು ತಡೆಗಟ್ಟಲು ಇಲಾಖೆ ಯೋಜನೆ ರೂಪಿಸಿದೆ.
ಇದಕ್ಕಾಗಿ ಮನೆ ಮನೆಯಿಂದಲೇ ಬಳಸಿದ ಎಣ್ಣೆಯನ್ನು ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಈ ಕುರಿತು ಶೀಘ್ರದಲ್ಲೇ ಅಧಿಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.


