ಬೆಂಗಳೂರು : ರಾಜ್ಯದಲ್ಲಿ ರೈತರ ಸಾಲ ಮನ್ನಾ ವಿಚಾರವಾಗಿ ರಾಜಕೀಯ ನಾಯಕರ ನಡುವೆ ವಾಗ್ದಾಳಿ ತೀವ್ರಗೊಂಡಿದೆ.
ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದು, "ರೈತರ ಸಾಲ ಮನ್ನಾ ಮಾಡಲು ಸರ್ಕಾರದ ಆರ್ಥಿಕ ಇಲಾಖೆ ಏನೂ ಕಷ್ಟಪಡಬೇಕಿಲ್ಲ.
ಬೆಂಗಳೂರಿನ ತಾವರೆಕೆರೆ ಬಳಿ ಡಿಎಲ್‌ಎಫ್ ಹಾಗೂ ನೈಸ್ ರಸ್ತೆ ಹೆಸರಿನಲ್ಲಿ ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ನುಂಗಲು ಹೊರಟಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ ಅವರು ಮನಸ್ಸು ಮಾಡಿದರೆ ತಮ್ಮ ವೈಯಕ್ತಿಕ ಸಂಪತ್ತಿನಿಂದಲೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬಹುದು" ಎಂದು ವ್ಯಂಗ್ಯವಾಡಿದ್ದರು.
ಈ ಹೇಳಿಕೆಗೆ ಇದೀಗ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ಖಾರವಾಗಿ ತಿರುಗೇಟು ನೀಡಿದ್ದಾರೆ. ವಿಪಕ್ಷ ನಾಯಕರ ಟೀಕೆಗೆ ಸವಾಲೆಸೆದಿರುವ ಅವರು, "ಅವರು ಹೇಳಿರುವ ಹಾಗೆ ಸಾಲ ಮನ್ನಾ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ.
ಆದರೆ, ನಮ್ಮ ಮೇಲೆ ಆರೋಪ ಮಾಡುತ್ತಿರುವವರು ಕೂಡ ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದು ಸಾಕಷ್ಟು ಸಂಪಾದನೆ ಮಾಡಿ ಇಟ್ಟುಕೊಂಡಿದ್ದಾರಲ್ಲವೇ? ಅವರೂ ಸ್ವಲ್ಪ ಹಣವನ್ನು ತಂದು ಸೇರಿಸಲಿ, ನಾವೂ ನಮ್ಮ ಕಡೆಯಿಂದ ಸ್ವಲ್ಪ ಹಣ ಹಾಕುತ್ತೇವೆ. ಇಬ್ಬರೂ ಒಟ್ಟಾಗಿ ಸೇರಿ ರೈತರ ಸಾಲ ಮನ್ನಾ ಮಾಡೋಣ ಬನ್ನಿ" ಎಂದು ಮಾರ್ಮಿಕವಾಗಿ ಸವಾಲು ಹಾಕಿದ್ದಾರೆ.


