ಚಿಕ್ಕಮಗಳೂರು : ರಾಜ್ಯದಲ್ಲಿ ಕೆಎಂಎಫ್ ಹಾಲಿನ ದರ ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆಯಿದೆ. ಪ್ರತಿ ಲೀಟರ್ ಹಾಲಿನ ದರವನ್ನು 8 ರೂಪಾಯಿ ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಸ್ತುತ ಪರಿಸ್ಥಿತಿಯಲ್ಲಿ ಹಾಲಿನ ದರ ಪರಿಷ್ಕರಣೆ ಮಾಡುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಮಾತನಾಡಿದ ಅವರು, ರೈತರ ಸಂಕಷ್ಟಗಳನ್ನು ವಿವರಿಸಿದರು.
ಜಾನುವಾರುಗಳಿಗೆ ನೀಡುವ ಮೇವು ಹಾಗೂ ಬೂಸಾದ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಹಾಲಿನ ಉತ್ಪಾದನಾ ವೆಚ್ಚ ದುಬಾರಿಯಾಗಿದೆ.
ಪರಿಣಾಮವಾಗಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದ್ದು, ದರ ಹೆಚ್ಚಳಕ್ಕಾಗಿ ರೈತರು ಆಗ್ರಹಿಸುತ್ತಿದ್ದಾರೆ. ಹೀಗಾಗಿ ರೈತರ ಹಿತ ಕಾಯಲು ಕೆಎಂಎಫ್ ಹಾಲಿನ ದರವನ್ನು ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


